ಇಸ್ಲಾಮಾಬಾದ್ (ಪಾಕಿಸ್ತಾನ): ಸರ್ಕಾರದ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿ ಲಾಭಗಳಿಸಿದ ಗಂಭೀರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಇತ್ತ ಅವರ ಆಪ್ತರಾಗಿರುವ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಯ ಅವರನ್ನು ಅಧಿಕೃತ ರಹಸ್ಯ ಕಾಯ್ದೆಯಡಿ ಶನಿವಾರ ಅವರ ಮನೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. 'ರಾಜತಾಂತ್ರಿಕ ಸೋರಿಕೆ' ವಿಚಾರಕ್ಕೆ ಸಂಬಂಧಿಸಿದಂತೆ ಖುರೇಷಿಯನ್ನು ಬಂಧಿಸಲಾಗಿದ್ದು, ಬಳಿಕ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‌ಐಎ) ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ.
67 ವರ್ಷದ ಶಾ ಮೆಹಮೂದ್ ಖುರೇಷಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಉಪಾಧ್ಯಕ್ಷ. ಇವರು ವಿದೇಶಾಂಗ ಸಚಿವರಾಗಿದ್ದಾಗ ಅಮೆರಿಕದಲ್ಲಿರುವ ಪಾಕ್ ರಾಯಭಾರಿ ಕಚೇರಿಗೆ ಕಳುಹಿಸಲಾಗಿದ್ದ ಅಧಿಕೃತ ಗೌಪ್ಯ ರಾಜತಾಂತ್ರಿಕ ರಹಸ್ಯವನ್ನು ಸೋರಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ಇವರ ವಿರುದ್ಧ ಪಾಕಿಸ್ತಾನ ದಂಡಸಂಹಿತೆಯ ಸೆಕ್ಷನ್ 5, 34, ಅಧಿಕೃತ ರಹಸ್ಯ ಕಾಯಿದೆಯ 9ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಎಫ್ಐಎರ್ ದಾಖಲಿಸಿದ ನಂತರ ಖುರೇಷಿ ಬಂಧನದ ಬೆಳವಣಿಗೆ ನಡೆದಿದೆ. ಈ ಕುರಿತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಸಾಮಾಜಿಕ ಜಾಲತಾಣ 'X' ಖಾತೆಯಲ್ಲಿ ಪಕ್ಷದ ಉಪಾಧ್ಯಕ್ಷರನ್ನು ಮತ್ತೊಮ್ಮೆ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.