ಲಾಹೋರ್ (ಪಾಕಿಸ್ತಾನ) : ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಿಟಿಐ ಪಕ್ಷ ಈಗಲೂ ಪಾಕಿಸ್ತಾನದಾದ್ಯಂತ ಸಾಕಷ್ಟು ಜನಪ್ರಿಯತೆ ಹೊಂದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ವಿವಿಧ ರಾಜಕೀಯ ನಾಯಕರು ಮತ್ತು ಪಕ್ಷಗಳ ಜನಪ್ರಿಯತೆಯ ಬಗ್ಗೆ ಇತ್ತೀಚೆಗೆ ನಡೆದ ಸಮೀಕ್ಷೆಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಆದಾಗ್ಯೂ ಪಂಜಾಬ್ ಪ್ರಾಂತ್ಯದಲ್ಲಿ ಪಿಟಿಐ ಮತ್ತು ಪಿಎಂಎಲ್-ಎನ್ ನಡುವಿನ ಜನಪ್ರಿಯತೆಯ ಅಂತರ ಕಡಿಮೆಯಾಗಿದ್ದು, ಇಲ್ಲಿ ಪಿಎಂಎಲ್-ಎನ್ ಪರವಾಗಿ ಜನಾಭಿಪ್ರಾಯ ವ್ಯಕ್ತವಾಗತೊಡಗಿದೆ ಎಂದು ಸಮೀಕ್ಷೆ ಹೇಳಿವೆ. ಕೆಲವು ತಿಂಗಳ ಹಿಂದೆ ಶೇಕಡಾ 15 ರಷ್ಟು ಇದ್ದ ಪಿಟಿಐನ ಜನಪ್ರಿಯತೆ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು ಶೇಕಡಾ 5ಕ್ಕೆ ಇಳಿದಿದೆ. ಆದರೆ ಇಡೀ ದೇಶದ ದೃಷ್ಟಿಕೋನದಲ್ಲಿ ನೋಡುವುದಾದರೆ ಪಿಟಿಐ ಈಗಲೂ ಪಿಎಂಎಲ್-ಎನ್ ಗಿಂತ ಸಾಕಷ್ಟು ಮುಂಚೂಣಿಯಲ್ಲಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ ಕಳೆದ 2018ರ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಪಿಟಿಐನ ಜನಪ್ರಿಯತೆ ದೇಶಾದ್ಯಂತ ಹೆಚ್ಚಾಗಿದೆ. ಹಾಗೆಯೇ ಪಿಎಂಎಲ್-ಎನ್ 2018ಕ್ಕಿಂತ ಈ ಬಾರಿ ಕಡಿಮೆ ಜನಪ್ರಿಯತೆ ಹೊಂದಿದೆ.
ಪಿಎಂಎಲ್-ಎನ್ ತನ್ನ ಭದ್ರಕೋಟೆಯಾಗಿದ್ದ ಪಂಜಾಬ್ನಲ್ಲಿ 2022 ರ ಏಪ್ರಿಲ್ ನಂತರ ಮತ್ತೆ ಜನಪ್ರಿಯತೆ ಗಳಿಸಿಕೊಂಡಿದೆ. ಸ್ವಯಂ ದೇಶ ಭ್ರಷ್ಟರಾಗಿ ವಿದೇಶದಲ್ಲಿ ವಾಸಿಸುತ್ತಿದ್ದ ಮಾಜಿ ಪ್ರಧಾನಿ ಮತ್ತು ಪಕ್ಷದ ಮುಖ್ಯಸ್ಥ ನವಾಜ್ ಷರೀಫ್ ಮರಳಿ ದೇಶಕ್ಕೆ ಬಂದ ನಂತರ ಅದು ಜನಪ್ರಿಯವಾಗತೊಡಗಿದೆ ಎಂದು ಸಮೀಕ್ಷೆ ತಿಳಿಸಿದೆ.