ಇಸ್ಲಾಮಾಬಾದ್: ಸಾಲ ಮರುಸ್ಥಾಪನೆಯ ಮಾತುಕತೆಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಸರ್ಕಾರಕ್ಕೆ ಕಠಿಣ ಪರಿಸ್ಥಿತಿಗಳನ್ನು ಒಡ್ಡುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ಹೇಳಿದ್ದಾರೆ. 7 ಶತಕೋಟಿ ಯುಎಸ್ ಡಾಲರ್ ನೆರವು ಪ್ಯಾಕೇಜ್‌ನ ಒಂಬತ್ತನೇ ಪರಿಶೀಲನೆಗಾಗಿ ನಾಥನ್ ಪೋರ್ಟರ್ ನೇತೃತ್ವದ ಐಎಂಎಫ್ ಮಿಷನ್ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ನೇತೃತ್ವದ ತಂಡದೊಂದಿಗೆ ಜನವರಿ 31 ರಂದು ಮಾತುಕತೆಗಳನ್ನು ಪ್ರಾರಂಭಿಸಿದೆ. ಪೇಶಾವರದಲ್ಲಿ ನಡೆದ ಅಪೆಕ್ಸ್ ಕಮಿಟಿ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿಗಳು ಈ ಟೀಕೆ ಮಾಡಿದ್ದಾರೆ. ಈ ಸಮಿತಿಯು ಉಗ್ರವಾದವನ್ನು ಎದುರಿಸಲು ರಚಿಸಲಾದ ಅತ್ಯುನ್ನತ ಪ್ರಾಂತೀಯ ಸಂಸ್ಥೆಯಾಗಿದೆ.
ದೇಶದ ಭದ್ರತಾ ಪರಿಸ್ಥಿತಿಯ ಕುರಿತು ಮಾತನಾಡಿದ ಶರೀಫ್, ಪರಿಸ್ಥಿತಿ ಇಡೀ ರಾಷ್ಟ್ರದ ಮುಂದಿದೆ ಎಂದು ಹೇಳಿದರು. ನಾನು ಇಲ್ಲಿ ಮಾತನಾಡುತ್ತಿರುವಾಗ ಐಎಂಎಫ್ ನಿಯೋಗ ಇಸ್ಲಾಮಾಬಾದ್‌ನಲ್ಲಿದೆ ಮತ್ತು ಅವರು ಹಣಕಾಸು ಸಚಿವ ಇಶಾಕ್ ದಾರ್ ಮತ್ತು ಅವರ ತಂಡಕ್ಕೆ ಕಠಿಣ ಪರಿಸ್ಥಿತಿ ಒಡ್ಡುತ್ತಿದ್ದಾರೆ ಎಂದು ಹೇಳಿದರು. ಈ ಹಂತದಲ್ಲಿ ಆರ್ಥಿಕ ಸವಾಲು ಊಹಿಸಲೂ ಅಸಾಧ್ಯವಾಗಿತ್ತು. ದೇಶವು ಪೂರೈಸಬೇಕಾದ ಐಎಂಎಫ್ ಷರತ್ತುಗಳು ನಮ್ಮ ಕಲ್ಪನೆಯನ್ನು ಮೀರಿವೆ ಎಂದು ಶರೀಫ್ ಹೇಳಿದರು. ಆದರೆ ಹಣಕಾಸು ಸಹಾಯ ಪಡೆಯಬೇಕಾದರೆ ಈ ಶರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದರು.
ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು 3.09 ಶತಕೋಟಿ ಡಾಲರ್ಗೆ ಕುಸಿಯುವುದರೊಂದಿಗೆ ಇದು ಜನವರಿ 27 ರ ವೇಳೆಗೆ ಕೇವಲ 18 ದಿನಗಳ ಮೌಲ್ಯದ ಆಮದುಗಳನ್ನು ಸರಿದೂಗಿಸಲು ಸಾಕಾಗುವಷ್ಟು ಮಾತ್ರ ಉಳಿದಿದೆ. ಇಂಥ ಸಮಯದಲ್ಲಿ IMF ತಂಡದೊಂದಿಗೆ ನಡೆದ ಮಾತುಕತೆಗಳ ವಿವರಗಳನ್ನು ಶರೀಫ್ ಒದಗಿಸಲಿಲ್ಲ.