ವಾಷಿಂಗ್ಟನ್ (ಯುಎಸ್):ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜಾಗತಿಕ ಬೆಳವಣಿಗೆ ಕುಂಠಿತಗೊಂಡಿದೆ. ಈ ಯುದ್ಧದ ಪರಿಣಾಮದಿಂದಾಗಿ ಜಾಗತಿಕ ಬೆಳವಣಿಗೆ ಪ್ರಕ್ಷೇಪಣೆ ಶೇ.3.6 ರಷ್ಟಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜಿಸಿದೆ. ಆದರೆ, ಭಾರತದ ಆರ್ಥಿಕತೆಯಲ್ಲಿ ಶೇ.8.2 ರಷ್ಟು ಏರಿಕೆಯಾಗಿದ್ದು, ಕೋವಿಡ್‌ಗೆ ತುತ್ತಾಗಿರುವ ಚೀನಾದಲ್ಲಿ ಶೇ.4.4ರಷ್ಟು ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆ ಶೇ.8.2ರಷ್ಟು ಗುರುತಿಸಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 0.8 ರಷ್ಟು ಕಡಿತಗೊಂಡಿದೆ. ಕಳೆದ ವರ್ಷ ಭಾರತ ಶೇ.9ರಷ್ಟು ಆರ್ಥಿಕತೆಯಲ್ಲಿ ಏರಿಕೆ ದಾಖಲಿಸಿತ್ತು.
ಐಎಂಎಫ್ ವರದಿ ಪ್ರಕಾರ, 2022ರಲ್ಲಿ ಭಾರತೀಯ ಆರ್ಥಿಕತೆಗೆ 9.5 ಪ್ರತಿಶತದಷ್ಟು ಏರಿಕೆಯಾಗಬಹುದೆಂದು ಮೊದಲೇ ಯೋಜಿಸಿತ್ತು. ಆದ್ರೆ, ಜನವರಿ ವರದಿಯಲ್ಲಿ 0.5 ಶೇಕಡಾವಾರು ಅಂಕಗಳನ್ನು ಕಡಿತಗೊಂಡಿವೆ. ಈಗ ಮತ್ತೆ 0.8 ಅಂಕಗಳಿಂದ ಕಡಿಮೆಯಾಗಿದೆ. 2023ರ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.9ರಷ್ಟು ಎಂದು ದಾಖಲಿಸಿದೆ.
ವಿಶ್ವ ಬ್ಯಾಂಕ್ ಕಳೆದ ವಾರ ಬಿಡುಗಡೆ ಮಾಡಿದ ವರದಿಯಲ್ಲಿ 2022ರಲ್ಲಿ ಭಾರತೀಯ ಆರ್ಥಿಕತೆಗೆ ಶೇ.8ರಷ್ಟು ಬೆಳವಣಿಗೆ ಯೋಜಿಸಿದೆ. ಉಕ್ರೇನ್‌ನಲ್ಲಿನ ಯುದ್ಧ ಮತ್ತು ಕೋವಿಡ್ ಉಂಟಾದ ಆರ್ಥಿಕ ವಿನಾಶದಿಂದ ಭಾರತದ ಮೇಲೆ ಮಧ್ಯಮ ಪರಿಣಾಮ ಬೀರಿದೆ. ಆರ್ಥಿಕ ಬೆಳವಣಿಗೆಯಿಂದಾಗಿ ದಕ್ಷಿಣ ಏಷ್ಯಾದ ದೇಶಗಳು ನಿಧಾನವಾಗಿ ಚೇತರಿಕೆ ಕಾಣುತ್ತಿವೆ ಎಂದು ಹೇಳಿದೆ.
ಓದಿ:ಐಎಂಎಫ್ ಸಾಲ ಬರುವವರೆಗೂ ಹಣಕಾಸು ನೆರವು ನೀಡುವಂತೆ ಭಾರತಕ್ಕೆ ಶ್ರೀಲಂಕಾ ಮನವಿ
ಚೀನಾದ ಪ್ರಸಕ್ತ ವರ್ಷದ ಬೆಳವಣಿಗೆ ಶೇ.4.4 ಎಂದಿದೆ. ಕಳೆದ ವರ್ಷ ಚೀನಾ 8.1ರಷ್ಟು ಬೆಳವಣಿಗೆ ದರ ದಾಖಲಿಸಿತ್ತು. ಇನ್ನು 2023ರಲ್ಲಿ 5.1 ರಷ್ಟು ಬೆಳವಣಿಗೆ ದಾಖಲಾಗಲಿದೆ. ಕೊರೊನಾ ವೈರಸ್ ಹಾವಳಿ, ಇಂಧನ ದರ ಏರಿಕೆ ಮತ್ತು ಹಣದುಬ್ಬರದ ಪರಿಣಾಮ 2022ರಲ್ಲಿ ವಿಶ್ವದ ಆರ್ಥಿಕತೆ ಅಭಿವೃದ್ಧಿ ದರ ಕುಸಿತವಾಗಲಿದೆ. 2022ರಲ್ಲಿ ಜಾಗತಿಕ ಆರ್ಥಿಕತೆ 5.9ರಷ್ಟು ವೃದ್ಧಿಯಾಗಲಿದೆ ಎಂದು ಕಳೆದ ವರ್ಷ ಅಂದಾಜಿಸಲಾಗಿತ್ತು. ಆದರೆ, ಇದೀಗ ಅದನ್ನು ಶೇ.4.4ಕ್ಕೆ ಇಳಿಸಲಾಗಿದೆ ಎಂದು IMF ತನ್ನ ವರದಿಯಲ್ಲಿ ಹೇಳಿದೆ.
ಅಮೆರಿಕ, ಚೀನಾ, ಫ್ರಾನ್ಸ್, ಬ್ರಿಟನ್ ಸೇರಿದಂತೆ ವಿಶ್ವದ ಬಹುತೇಕ ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ದೇಶಗಳ ಆರ್ಥಿಕ ಪ್ರಗತಿ ದರವು 2021ಕ್ಕೆ ಹೋಲಿಸಿದರೆ 2022ರಲ್ಲಿ ಕುಂಠಿತವಾಗಲಿದೆ. ಆದರೆ, ಭಾರತ 2022ರಲ್ಲೂ ಶೇ.9ರಷ್ಟುಪ್ರಗತಿ ದರ ದಾಖಲಿಸಲಿದೆ. ಇದು ವಿಶ್ವದ ಬೃಹತ್ ಆರ್ಥಿಕತೆಗಳಿಗೆ ಹೋಲಿಸಿದರೆ ದೊಡ್ಡಮಟ್ಟಿನ ಪ್ರಗತಿಯಾಗಿದೆ. 2020-21ರಲ್ಲಿ ಭಾರತದ ಆರ್ಥಿಕತೆ ಭಾರೀ ಕುಸಿತ ಕಂಡು ಶೇ.-7.3ಕ್ಕೆ ತಲುಪಿತ್ತು. ಕಳೆದ ವರ್ಷ ಶೇ.9ರ ಪ್ರಗತಿ ದಾಖಲಿಸಿತ್ತು. 2022ರಲ್ಲೂ ಭಾರತ ಶೇ.9ರಷ್ಟು ಪ್ರಗತಿ ದರ ದಾಖಲಿಸಲಿದೆ ಎಂದು ಐಎಂಎಫ್ ತನ್ನ ವರದಿಯಲ್ಲಿ ಹೇಳಿದೆ.
ಭಾರತದಲ್ಲಿ ಕಡುಬಡತನ 2011-2019ರ ಅವಧಿಯಲ್ಲಿ ಶೇ.12.3ರಷ್ಟುಇಳಿಕೆಯಾಗಿದೆ. 2011ರಲ್ಲಿ ಶೇ.22.5ರಷ್ಟಿದ್ದ ಕಡುಬಡವರ ಸಂಖ್ಯೆ 2019ರಲ್ಲಿ ಶೇ.10.2ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್‌ನ ಸಂಶೋಧನಾ ವರದಿಯೊಂದು ತಿಳಿಸಿದೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಭಾರತದಲ್ಲಿ ಕಡುಬಡತನ ಬಹುತೇಕ ನಿರ್ಮೂಲನೆಯಾಗಿದೆ. ಸರ್ಕಾರಗಳು ಉಚಿತ ಆಹಾರ ಪೂರೈಸುತ್ತಿರುವುದರಿಂದ ಭಾರತದಲ್ಲಿನ ಕಡು ಬಡತನ ಕಳೆದ 40 ವರ್ಷಗಳಲ್ಲೇ ಈಗ ಕನಿಷ್ಠಕ್ಕೆ ಕುಸಿದಿದೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈಗ ವಿಶ್ವಬ್ಯಾಂಕ್ ಕೂಡ ಭಾರತದಲ್ಲಿ ಕಡುಬಡವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಹೇಳಿರುವುದು ಆಶಾಭಾವನೆ ಮೂಡಿಸಿದೆ.