ಇಸ್ಲಾಮಾಬಾದ್(ಪಾಕಿಸ್ತಾನ):ಅವಿಶ್ವಾಸ ನಿರ್ಣಯದ ಮತದಾನದ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕ್ನ ಪ್ರತಿ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮರ್ಯಮ್ ಅವರು ಇಮ್ರಾನ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಮ್ರಾನ್ ಅಧಿಕಾರ ಕಳೆದುಕೊಳ್ಳುತ್ತಿರುವ ಕಾರಣದಿಂದ ಅವರಿಗೆ ಹುಚ್ಚು ಹಿಡಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರದಂದು ರಾಷ್ಟ್ರವನ್ನುದ್ದೇಶಿಸಿ ಇಮ್ರಾನ್ ಖಾನ್ ಭಾಷಣ ಮಾಡಿದ್ದು, ಭಾರತವನ್ನು ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮರ್ಯಮ್ ನವಾಜ್ ಸರಣಿ ಟ್ವೀಟ್‌ಗಳಲ್ಲಿ ಇಮ್ರಾನ್ ಖಾನ್ ಪಕ್ಷವೇ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದೆ. ಅವರನ್ನು ಬೇರೆಯವರು ಯಾರೂ ಅಧಿಕಾರದಿಂದ ಕೆಳಗಿಳಿಸಿಲ್ಲ ಎಂಬುದನ್ನು ಯಾರಾದರೂ ಅವರಿಗೆ ತಿಳಿಸಬೇಕು. ಅವರು ಭಾರತವನ್ನು ಇಷ್ಟ ಪಡುವುದಾದರೆ ಪಾಕಿಸ್ತಾನವನ್ನು ಬಿಟ್ಟು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ದುನ್ಯಾ ನ್ಯೂಸ್ ವರದಿ ಮಾಡಿದೆ.