ಟೆಲ್ ಅವಿವ್ (ಇಸ್ರೇಲ್):ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವಾಯುದಾಳಿ ಮುಂದುವರಿಸಿದೆ. ಯುದ್ಧ ಆರಂಭವಾಗಿ ಬುಧವಾರಕ್ಕೆ 19 ದಿನಗಳಾಗಿದೆ. 6,500ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಈ ಮಧ್ಯೆ ಹಮಾಸ್ ಉಗ್ರರಿಗೆ ಸೇರಿದ ಟಿಪ್ಪಣಿಯೊಂದು ಹೊರಬಿದ್ದಿದೆ. ಅದರಲ್ಲಿ 'ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಬೇಕು, ಅದಕ್ಕಾಗಿ ಸಜ್ಜಾಗಿ' ಎಂದು ಕರೆ ನೀಡಲಾಗಿದೆ. ಇದು ಉಗ್ರರ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತದೆ ಎಂದು ಇಸ್ರೇಲ್ ಹೇಳಿದೆ.
ಉಗ್ರರ ಬರಹವುಳ್ಳ ಚೀಟಿಯನ್ನು ಐಡಿಎಫ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಯೋತ್ಪಾದಕ ಗುಂಪಾದ ಹಮಾಸ್ ತನ್ನ ಉದ್ದೇಶಗಳ ಬಗ್ಗೆ ಬಹಳ ಸ್ಪಷ್ಟವಾಗಿದೆ. ಯುದ್ಧ ಮುಗಿಸುವ ಯಾವುದೇ ಇರಾದೆಯನ್ನು ಅದು ಹೊಂದಿಲ್ಲ ಎಂದು ತೋರಿಸುತ್ತದೆ. ರಕ್ತಪಿಪಾಸುಗಳಿಗೆ ಕೊನೆಯೇ ಇಲ್ಲವಾಗಿದೆ ಎಂದು ಹೇಳಿದೆ.
ಚೀಟಿಯಲ್ಲಿನ ಬರಹ ಹೀಗಿದೆ:ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬುಧವಾರ ಹಮಾಸ್‌ನ ಉಗ್ರನಿಂದ ಪಡೆದ ಟಿಪ್ಪಣಿಯಲ್ಲಿ, "ನೀವು ನಿಮ್ಮ ಶಸ್ತ್ರಾಸ್ತ್ರಗಳನ್ನು ಹರಿತಗೊಳಿಸಬೇಕು. ಅಲ್ಲಾಹುವಿನ ಮುಂದೆ ನಿಮ್ಮ ಉದ್ದೇಶಗಳು ಪರಿಶುದ್ಧವಾಗಿರಬೇಕು. ಶತ್ರುವಿನ ತಲೆ ಕಡಿದು, ಹೃದಯ ಮತ್ತು ಯಕೃತ್ತುಗಳನ್ನು ಕಿತ್ತು, ಹರಿದು ಹಾಕುವುದನ್ನು ಹೊರತುಪಡಿಸಿ ಯಾವುದೇ ಚಿಕಿತ್ಸೆ ಇಲ್ಲದ ರೋಗವಿದು ಎಂದು ತಿಳಿಯಿರಿ" ಎಂದು ಬರೆಯಲಾಗಿದೆ. ಇದನ್ನು ಹಮಾಸ್ ತನ್ನವರಿಗೆ ಕಳುಹಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.