ಇಸ್ರೇಲ್:ಗಾಜಾ ಪಟ್ಟಿಯನ್ನು ಛಿದ್ರ ಮಾಡುತ್ತಿರುವ ಇಸ್ರೇಲ್, ವಾಯುದಾಳಿಯ ಜೊತೆಗೆ ಭೂದಾಳಿಗೆ ಸೇನೆಯನ್ನು ಸಜ್ಜು ಮಾಡುತ್ತಿದೆ. 20ನೇ ದಿನದ ಯುದ್ಧದಲ್ಲಿ ಈವರೆಗೂ ಎರಡೂ ಕಡೆಗಳಿಂದ 7 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಇಷ್ಟಾದರೂ, ಹಠ ಬಿಡದ ಹಮಾಸ್ ಬಂಡುಕೋರರು ಇಸ್ರೇಲ್ ಗಡಿಗಳಲ್ಲಿ ನುಸುಳಿ ಬಂದು ಸೇನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಇದರ ವಿಡಿಯೋವೊಂದನ್ನು ಐಡಿಎಫ್ ಹಂಚಿಕೊಂಡಿದೆ.
ದಕ್ಷಿಣ ಇಸ್ರೇಲ್‌ನ ಕಿಬ್ಬುಜ್ ಬೀರಿ ಎಂಬಲ್ಲಿ ಹಮಾಸ್ ಉಗ್ರರನ್ನು ಹೊಡೆದುರುಳಿಸಿ ನಾಗರಿಕರನ್ನು ರಕ್ಷಿಸಲಾಗಿದೆ. ಕಾರಿನಲ್ಲಿ ಬರುವ ಉಗ್ರರು ಇಸ್ರೇಲ್ ಸೈನಿಕರನ್ನು ಕಂಡು ರಸ್ತೆ ಪಕ್ಕದಲ್ಲಿ ದಿಢೀರ್ ವಾಹನ ನಿಲ್ಲಿಸಿ ಓಟಕಿತ್ತಿದ್ದಾರೆ. ಇದನ್ನು ಕಂಡ ಸೈನಿಕರು ಗುಂಡಿನ ದಾಳಿ ನಡೆಸಿ ಇಬ್ಬರು ಉಗ್ರರನ್ನು ಬೇಟೆಯಾಡುತ್ತಾರೆ. ಬಳಿಕ ಅಲ್ಲಿಂದ ಹಲವು ನಾಗರಿಕರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಅದನ್ನು ಐಡಿಎಫ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಹಮಾಸ್ ಗುಂಪಿನವರನ್ನು ನಾಶ ಮಾಡಿ ನಮ್ಮ ಜನರನ್ನು ರಕ್ಷಣೆ ಮಾಡಿದ ನೀವೆಂದೂ ಕಂಡಿರದ ರೋಚಕ ದೃಶ್ಯವನ್ನು ವೀಕ್ಷಿಸಿ ಎಂದು ಬರೆದುಕೊಂಡಿದೆ.
ಉಗ್ರ ಕೋಠಿಗಳು ಉಡೀಸ್:ಗಾಜಾದ ಮೇಲೆ ಪದಾತಿದಳದ ಆಕ್ರಮಣಕ್ಕೆ ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಇಸ್ರೇಲ್ ಯುದ್ಧ ಟ್ಯಾಂಕ್‌ಗಳು ಮತ್ತು ಭೂ ಸೇನಾಪಡೆಗಳು ಸಾಲು ಸಾಲಾಗಿ ಗಾಜಾ ಪಟ್ಟಿ ಕಡೆಗೆ ಬರುತ್ತಿವೆ. ಹಮಾಸ್ ಭಯೋತ್ಪಾದಕರ ಅಡಗುತಾಣಗಳು, ಲಾಂಚ್ ಪೋಸ್ಟ್‌ಗಳನ್ನು ಧ್ವಂಸ ಮಾಡಲಾಗುತ್ತಿದೆ.
ಇದರ ವಿಡಿಯೋವನ್ನೂ ಹಂಚಿಕೊಂಡಿರುವ ಇಸ್ರೇಲ್ ಸೇನೆ, ಮುಂದಿನ ಹಂತದ ಯುದ್ಧದ ತಯಾರಿಯಲ್ಲಿ ಐಡಿಎಫ್ ಪಡೆಗಳು ಉತ್ತರ ಗಾಜಾದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಯುದ್ಧ ಟ್ಯಾಂಕರ್ಗಳು ಮತ್ತು ಪದಾತಿ ದಳಗಳು ಹಲವಾರು ಭಯೋತ್ಪಾದಕ ನೆಲೆಗಳು, ಟ್ಯಾಂಕ್ ವಿರೋಧಿ ಕ್ಷಿಪಣಿ ಉಡಾವಣಾ ಪೋಸ್ಟ್‌ಗಳನ್ನು ಧ್ವಂಸ ಮಾಡಿವೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದೆ.
ಇಸ್ರೇಲ್ ಉಳಿವಿಗೆ ಯುದ್ಧ:ಇನ್ನು, ಇಸ್ರೇಲ್ ತನ್ನ ಅಸ್ತಿತ್ವಕ್ಕಾಗಿ ಯುದ್ಧ ಮಾಡುತ್ತಿದೆ ಎಂಬ ತಮ್ಮ ಮಾತನ್ನು ಪುನರುಚ್ಚರಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ವಿರುದ್ಧ ನಡೆಸುತ್ತಿರುವ ಈ ಯುದ್ಧದ ಗುರಿ ನಮ್ಮ ರಾಷ್ಟ್ರದ ರಕ್ಷಣೆಯಾಗಿದೆ. ಗಾಜಾದಲ್ಲಿ ಅಡಗಿರುವ ಹಮಾಸ್ ಗುಂಪನ್ನು ನಾಶಮಾಡಲು ನೆಲದ ಆಕ್ರಮಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.