ಜೆರುಸಲೇಂ:ಹಮಾಸ್ ಉಗ್ರರು ಅಕ್ಟೋಬರ್ 7 ರಂದು ನಡೆಸಿದ ಅಮಾನವೀಯ ದಾಳಿಯ ವೇಳೆ ಇಸ್ರೇಲಿಗರನ್ನು ಅಪಹರಿಸಿ ಗಾಜಾದಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ 203 ಕುಟುಂಬಗಳನ್ನು ಪತ್ತೆ ಮಾಡಲಾಗಿದೆ. ಆದರೆ, ಒತ್ತೆಯಾಳುಗಳ ನಿಖರ ಸಂಖ್ಯೆ ಸಿಕ್ಕಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಭದ್ರತಾ ಪಡೆಗಳು (ಐಡಿಎಫ್) ಗುರುವಾರ ತಿಳಿಸಿವೆ.
ಗಾಜಾದಲ್ಲಿ ಈಗಲೂ ಒತ್ತೆಯಾಳಿರುವ ಇಸ್ರೇಲಿಗರ ಪೈಕಿ 203 ಕುಟುಂಬಗಳನ್ನು ಪತ್ತೆ ಹಚ್ಚಲಾಗಿದೆ. ಅವರ ಕುಟುಂಬಗಳಿಂದ ಮಾಹಿತಿ ಪಡೆಯಲಾಗಿದೆ. ಎಷ್ಟು ಜನರು ಹಮಾಸ್ ಬಳಿ ಇದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ಜಾರಿಯಲ್ಲಿದೆ. ಒತ್ತೆಯಾಳುಗಳ ಸಂಖ್ಯೆಯ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. 203 ಅಪಹರಣಕ್ಕೊಳಗಾದವರ ಕುಟುಂಬಗಳ ಸಂಪರ್ಕ ಸಾಧಿಸಲಾಗಿದೆ. ಭೀಕರ ಹಮಾಸ್ ದಾಳಿಯಲ್ಲಿ ಸಾವನ್ನಪ್ಪಿದ 306 ಯೋಧರ ಕುಟುಂಬಗಳಿಗೆ ಸೇನೆಯು ಮಾಹಿತಿ ನೀಡಿದೆ ಎಂದು ಹೇಳಿದೆ.
ಗಾಜಾದಲ್ಲಿ 200 ರಿಂದ 250 ಇಸ್ರೇಲಿಗರು ಒತ್ತೆಯಾಳುಗಳಿದ್ದಾರೆ ಎಂದು ಹಮಾಸ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ ಬಳಿಕ, ಇಸ್ರೇಲ್ ಸೇನೆ ಒತ್ತೆಯಾಳುಗಳ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದಿರುವುದು ಗಮನಾರ್ಹ.
ಈ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿದ್ದ ಹಮಾಸ್‌ನ ಮಿಲಿಟರಿ ವಿಭಾಗದ ವಕ್ತಾರ ಅಬು ಒಬೈದಾ, ಇಸ್ರೇಲ್ನ 200 ಮಂದಿಯನ್ನು ಒತ್ತೆಯಾಳುಗಳನ್ನು ಹಿಡಿದಿಡಲಾಗಿದೆ. ಉಳಿದವರನ್ನು ಗಾಜಾ ಪಟ್ಟಿಯಲ್ಲಿರುವ ಇತರ ಗುಂಪುಗಳು ತನ್ನಲ್ಲಿ ಸೆರೆಹಿಡಿದಿಟ್ಟಿವೆ. ಇಸ್ರೇಲ್ನ ನಿರಂತರ ಬಾಂಬ್ ದಾಳಿಯಿಂದಾಗಿ, ಮುತ್ತಿಗೆ ಹಾಕಿದ ಪ್ರದೇಶಗಳಿಂದ ಕರೆತಂದ ಒತ್ತೆಯಾಳುಗಳ ನಿಖರ ಸಂಖ್ಯೆಯನ್ನು ನಿರ್ಧರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದರು.
ವಿದೇಶಿ ಪ್ರಜೆಗಳು ಒತ್ತೆಯಿಲ್ಲ:ಗಾಜಾದಲ್ಲಿ ವಿದೇಶಿ ಪ್ರಜೆಗಳು ಯಾರೊಬ್ಬರು ಒತ್ತೆಯಿಟ್ಟುಕೊಂಡಿಲ್ಲ. ಸಮಯ ಬಂದಾಗ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು. ಅಲ್ ಕಸ್ಸಾಮ್ ಬ್ರಿಗೇಡ್, ಎಲ್ಲ ಬಂಧಿಗಳನ್ನು ರಕ್ಷಿಸಲು ಬದ್ಧವಾಗಿದೆ. ಆದರೆ, ಇಸ್ರೇಲಿ ಮಿಲಿಟರಿಯೊಂದಿಗೆ ಸಹಕರಿಸುತ್ತಿರುವ ಯಾವುದೇ ವಿದೇಶಿ ಪ್ರಜೆಯನ್ನು ನಮ್ಮ ಶತ್ರುಗಳುಎಂದು ಪರಿಗಣಿಸಲಾಗುತ್ತದೆ ಎಂದು ಅಬು ಒಬೈದಾ ಎಚ್ಚರಿಸಿದರು.
ಇಬ್ಬರು ಒತ್ತೆಯಾಳುಗಳ ಶವ ಪತ್ತೆ:ಇದೇ ವೇಳೆ ಹಮಾಸ್ ಒತ್ತೆ ಇಟ್ಟುಕೊಂಡಿದ್ದವರ ಪೈಕಿ ಇಬ್ಬರು ನಾಗರಿಕರ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ. ಈ ಘಟನೆ ನಮ್ಮ ಹೃದಯವನ್ನು ಕದಡಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ಕಾಟ್ಜ್, ಮೃತರನ್ನು ಇಸ್ರೇಲ್ ಯುವತಿ ನೋಯಾ ಮತ್ತು ಆಕೆಯ ಅಜ್ಜಿ ಕಾರ್ಮೆಲಾ ಎಂದು ಗುರುತಿಸಲಾಗಿದೆ. ಅವರ ಮೃತ ದೇಹಗಳು ಬುಧವಾರ ಪತ್ತೆಯಾಗಿವೆ ಎಂದು ತಿಳಿಸಲು ನೋವಾಗುತ್ತಿದೆ. ಹಮಾಸ್ ವಶದಲ್ಲಿದ್ದ ಇಬ್ಬರನ್ನು ಮರಳಿ ತಾಯ್ನಾಡಿಗೆ ತರುವ ಪ್ರಯತ್ನ ನಡೆಸಿರುವ ನಡುವೆ ಅವರ ಶವಗಳು ಪತ್ತೆಯಾಗಿದ್ದು, ತೀವ್ರ ನೋವು ತಂದಿದೆ. ನಮ್ಮ ಹೃದಯಗಳು ಒಡೆದು ಹೋಗಿವೆ ಎಂದು ಬರೆದುಕೊಂಡಿದ್ದಾರೆ.
ಮೃತ ಇಬ್ಬರನ್ನು ಕಿಬ್ಬುಟ್ಜ್ ನಿರ್ ಓಝ್ ಪ್ರದೇಶದಲ್ಲಿ ಹಮಾಸ್ ಸೆರೆಹಿಡಿದಿತ್ತು. ಶವಗಳು ಎಲ್ಲಿ ಪತ್ತೆಯಾಗಿವೆ ಎಂಬುದನ್ನು ಸಚಿವರು ತಿಳಿಸಿಲ್ಲ. ಮೊನ್ನೆಯಷ್ಟೇ ಹಮಾಸ್ ಒತ್ತೆಯಾಳುಗಳಲ್ಲಿ ಒಬ್ಬ ಯುವತಿ 21 ವರ್ಷದ ಮಿಯಾ ಸ್ಕೆಮ್ ಎಂಬಾಕೆಯ ವಿಡಿಯೋವನ್ನು ಹಮಾಸ್ ಹಂಚಿಕೊಂಡಿತ್ತು. ವೀಡಿಯೊದಲ್ಲಿ ಆಕೆ ತಾನು ಗಾಯಗೊಂಡಿದ್ದು, ಅದಕ್ಕೆ ಇಲ್ಲಿನ ವೈದ್ಯರು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಹೇಳಿದ್ದಳು. ಜೊತೆಗ ತನ್ನನ್ನು ಬೇಗನೇ ಗಾಜಾದಿಂದ ಇಸ್ರೇಲ್ಗೆ ಕರೆದೊಯ್ಯಲು ಕುಟುಂಬ ಮತ್ತು ಸರ್ಕಾರವನ್ನು ಕೋರಿದ್ದಳು.
ಇದನ್ನೂ ಓದಿ:'ನಮ್ಮನ್ನಿಲ್ಲಿ ಚೆನ್ನಾಗಿ ನೋಡಿಕೊಳ್ತಿದಾರೆ': ಹಮಾಸ್ ಉಗ್ರರು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಒತ್ತೆಯಾಳು ಯುವತಿ ಹೇಳಿಕೆ