ಟೆಲ್ ಅವೀವ್ (ಇಸ್ರೇಲ್) :ಗಾಜಾದಲ್ಲಿ ಅಡಗಿರುವ ಹಮಾಸ್ ಉಗ್ರರ ದಮನಕ್ಕೆ ವಾಯುದಾಳಿಯ ಜೊತೆಗೆ ಭೂಸೇನಾ ದಾಳಿಯನ್ನೂ ಆರಂಭಿಸಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಈ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆಯ ನೌಕಾ ಕಮಾಂಡರ್ ಅಬು ಸಾಹಿಬಾನ್‌ನನ್ನು ಬೇಟೆ ಆಡಿರುವ ಮಾಡಿದೆ ಎಂದು ಹೇಳಿದೆ. ಇದೇ ವೇಳೆ ಒತ್ತೆಯಾಳುಗಳನ್ನು ಭೇಟಿ ಮಾಡುವಂತೆ ಇಸ್ರೇಲ್ ಪ್ರಧಾನಿಗೆ ಜನರು ಆಗ್ರಹಿಸಿದ್ದಾರೆ.
ದಾಳಿಯಲ್ಲಿ ಕೊಲ್ಲಲ್ಪಟ್ಟ ಕಮಾಂಡರ್ ಸಮುದ್ರದ ಮೂಲಕ ಹಮಾಸ್ ಉಗ್ರರ ಒಳನುಸುಳುವಿಕೆಯನ್ನು ಯೋಜಿಸಿ ಕಾರ್ಯಗತಗೊಳಿಸುತ್ತಿದ್ದ. ಅದನ್ನು ನಮ್ಮ ಪಡೆಗಳು ವಿಫಲಗೊಳಿಸಿವೆ. ಮಾಸ್ಟರ್ ಮೈಂಡ್ ಅನ್ನೇ ಹೊಡೆರುದುಳಿಸಿವೆ ಎಂದು ಸೇನೆ ಶನಿವಾರ ತಿಳಿಸಿದೆ. ಇದಕ್ಕೂ ಮುನ್ನ ವೈಮಾನಿಕ ದಾಳಿಯ ಮುಂದಾಳುವಾಗಿದ್ದ ಅಬು ರಕ್ಬೆಹ್ನನ್ನು ಹತ್ಯೆ ಮಾಡಲಾಗಿತ್ತು. ಇದೀಗ ನೌಕಾ ಕಮಾಂಡರ್ ಕೂಡ ಬಲಿಯಾಗಿದ್ದಾನೆ.
ಐಡಿಎಫ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಲಗರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನಮ್ಮ ಸೇನೆಯು ಗಾಜಾ ಪಟ್ಟಿಯತ್ತ ಮುನ್ನುಗ್ಗುತ್ತಿದೆ. ಇನ್ನು ಮುಂದೆ ಕಾರ್ಯಾಚರಣೆ ಹೆಚ್ಚಾಗಲಿದೆ. ಶುಕ್ರವಾರ ಮತ್ತು ಶನಿವಾರ ಹಮಾಸ್‌ನ 140 ಭೂಗತ ನೆಲೆಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದರು.
ಒತ್ತೆಯಾಳುಗಳ ಭೇಟಿಯಾಗಿ:ಇಸ್ರೇಲ್ ಭೂಸೇನೆಯು ಗಾಜಾದಲ್ಲಿ ಕಾರ್ಯಾಚರಣೆ ಆರಂಭಿಸಿರುವುದರಿಂದ ಹಮಾಸ್ ಉಗ್ರರ ವಶದಲ್ಲಿರುವ ಒತ್ತೆಯಾಳುಗಳನ್ನು ಭೇಟಿಯಾಗುವಂತೆ ಒತ್ತೆಯಾಳುಗಳು ಮತ್ತು ನಾಪತ್ತೆಯಾದ ಕುಟುಂಬಗಳ ವೇದಿಕೆ ಶನಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಒತ್ತಾಯಿಸಿದೆ.
ಒತ್ತೆಯಾಳುಗಳ ಕುಟುಂಬಗಳು ಪ್ರತಿ ರಾತ್ರಿಯನ್ನು ಆತಂಕದಲ್ಲಿಯೇ ಕಳೆಯುತ್ತಿವೆ. ಇಸ್ರೇಲ್ ಭೂಸೇನೆಯು ನೆಲದ ದಾಳಿ ಆರಂಭಿಸಿದೆ. ವಶದಲ್ಲಿರುವವರಿಗೆ ಯಾವುದೇ ತೊಂದರೆ ಉಂಟಾಗಬಾರದು. ಅದಕ್ಕಾಗಿ ಅವರನ್ನ ಭೇಟಿ ಮಾಡಿ, ಅವರ ಇರುವಿಕೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.
ನೆಲದ ಕಾರ್ಯಾಚರಣೆಯಿಂದ ಒತ್ತೆಯಾಳುಗಳಿಗೆ ತೊಂದರೆಯಾಗುವ ಸಾಧ್ಯತೆ ಇದ್ದು, ಅವರನ್ನು ಕುಟುಂಬಸ್ಥರೊಂದಿಗೆ ಭೇಟಿ ಮಾಡಿಸುವ ಬಗ್ಗೆಯೂ ಸರ್ಕಾರ ಚಿಂತಿಸಬೇಕು. 229 ಒತ್ತೆಯಾಳುಗಳ ಜೀವ ರಕ್ಷಣೆ ಮತ್ತು ವಾಪಸ್ ಕರೆತರುವ ಬಗ್ಗೆ ಕ್ಯಾಬಿನೆಟ್ ಕ್ರಮ ಕೈಗೊಳ್ಳಬೇಕು. ತಮ್ಮ ಪ್ರೀತಿಪಾತ್ರರಿಂದ ದೂರವಾಗಿರುವ ಕುಟುಂಬಗಳು ಹತಾಶೆ, ನೋವು, ಕೋಪದಲ್ಲಿ ಮುಳುಗಿವೆ. ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಈ ಬಗ್ಗೆ ಇಸ್ರೇಲ್ ವಾರ್ ಕ್ಯಾಬಿನೆಟ್‌ನಿಂದ ವಿವರಣೆ ಕೋರುತ್ತಿದ್ದಾರೆ ಎಂದು ವೇದಿಕೆ ಹೇಳಿದೆ. ಇದರ ಜೊತೆಗೆ ಒತ್ತೆಯಾಳುಗಳ ಬಿಡುಗಡೆಗೆ ವಿಶ್ವ ನಾಯಕರ ಬೆಂಬಲವನ್ನೂ ಇಸ್ರೇಲ್ ಸರ್ಕಾರ ಪಡೆದುಕೊಳ್ಳಬೇಕು ಎಂದು ವೇದಿಕೆ ತಿಳಿಸಿದೆ.
ಇದನ್ನೂ ಓದಿ:ಇಸ್ರೇಲ್ - ಹಮಾಸ್ ಸಂಘರ್ಷ: ಗಾಜಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಿಬ್ಬಂದಿಯ ಸಂಪರ್ಕ ಕಡಿತ