ಯುಕೆ(ಯುನೈಟೆಡ್ ಕಿಂಗ್‌ಡಮ್): ಭಾರತದ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ತಮ್ಮ ಕರೆಗಳು ರೆಕಾರ್ಡ್ ಆಗುತ್ತಿರುವುದರಿಂದ ಫೋನ್‌ನಲ್ಲಿ ಮಾತನಾಡುವಾಗ ಜಾಗರೂಕರಾಗಿರಿ ಎಂದು ಗುಪ್ತಚರ ಅಧಿಕಾರಿಗಳು ನನಗೆ ಎಚ್ಚರಿಕೆ ನೀಡಿದ್ದರು. ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ನನ್ನ ಫೋನ್ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ. ಇದು ಭಾರತೀಯ ಪ್ರಜಾಪ್ರಭುತ್ವ" ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುತ್ತಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಸಲಹೆಗಾರ ಸ್ಯಾಮ್ ಪಿತ್ರೋಡಾ ಅವರು '21ನೇ ಶತಮಾನದಲ್ಲಿ ಕೇಳಲು ಕಲಿಯುವುದು' ಎಂಬ ವಿಷಯದ ಕುರಿತು ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ವಿದ್ಯಾರ್ಥಿಗಳ ಸಮ್ಮುಖದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದ ಯೂಟ್ಯೂಬ್ ಲಿಂಕ್ ಅನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಫೋನ್‌ನಲ್ಲೂ ಪೆಗಾಸಸ್: "ಪ್ರತಿಪಕ್ಷಗಳ ನಾಯಕರು, ನ್ಯಾಯಾಧೀಶರು, ಪತ್ರಕರ್ತರು, ನಾಗರಿಕರ ಮೇಲೆ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಬೇಹುಗಾರಿಕೆ ಮಾಡಲಾಗುತ್ತಿದೆ. ದೇಶದ ನಾಗರಿಕರ ಮೂಲ ಹಕ್ಕುಗಳನ್ನು ಈ ಮೂಲಕ ದಮನ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಆಟವಾಡುತ್ತಿದ್ದಾರೆ. ಪೆಗಾಸಸ್ ಅನ್ನು ಉಗ್ರವಾದದ ವಿರುದ್ಧ ಹೋರಾಡಲು ಬಳಕೆ ಮಾಡಲಾಗುತ್ತದೆ. ನಾನೇ ನನ್ನ ಫೋನ್‌ನಲ್ಲಿ ಪೆಗಾಸಸ್ ಹೊಂದಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಪೆಗಾಸಸ್ ಮೂಲಕ ರಾಜಕಾರಣಿಗಳ ಫೋನ್‌ನಿಂದ ಮಾಹಿತಿ ಕಳ್ಳತನ ಮಾಡಲಾಗುತ್ತಿದೆ. ನನಗೆ ಗುಪ್ತಚರ ಅಧಿಕಾರಿಗಳು ಕರೆ ಮಾಡಿ, ದಯವಿಟ್ಟು ನೀವು ಫೋನ್‌ನಲ್ಲಿ ಮಾತನಾಡುವಾಗ ಎಚ್ಚರದಿಂದಿರಬೇಕು, ಏನು ಹೇಳುತ್ತಿದ್ದೀರಿ ಎಂಬುದರ ಕುರಿತು ಜಾಗರೂಕರಾಗಿರಿ ಎಂದು ಹೇಳಿದ್ದರು" ಎಂದು ರಾಹುಲ್ ಗಾಂಧಿ ತಿಳಿಸಿದರು.