ನ್ಯೂಯಾರ್ಕ್ (ಅಮೆರಿಕ): ನಾಲ್ಕು ದಿನ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಕೃಷಿ, ಮಾರುಕಟ್ಟೆ, ಇಂಜಿನಿಯರಿಂಗ್, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಖ್ಯಾತ ಶಿಕ್ಷಣ ತಜ್ಞರ ಗುಂಪಿನೊಂದಿಗೆ ಬುಧವಾರ ನ್ಯೂಯಾರ್ಕ್‌ನಲ್ಲಿ ಸಭೆ ನಡೆಸಿದರು.
ಇದರಲ್ಲಿ ಭಾಗಿಯಾಗಿದ್ದ ಅಮೆರಿಕದ ಚಿಂತಕ ಹಾಗೂ ಬೋಸ್ಟನ್‌ನ ಈಶಾನ್ಯ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ ಮ್ಯಾಕ್ಸ್ ಅಬ್ರಹ್ಮ್ಸ್ ಪ್ರಧಾನಿ ಮೋದಿ ಸಮೀಪ್ಯತೆ ಮತ್ತು ಮುಕ್ತತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂವಾದದ ನಂತರ ಈ ಕುರಿತು ಟ್ವೀಟ್ ಮಾಡಿದ ಅವರು "ನಾನು ಪ್ರಧಾನಿ ಮೋದಿ ಅವರೊಂದಿಗಿನ ಸಂವಾದದಿಂದ ಪ್ರಭಾವಿತನಾಗಿ ಬಂದಿದ್ದೇನೆ. ಸಂವಾದದಲ್ಲಿ ಭಾಗಿಯಾಗಿದ್ದ ಎಲ್ಲಾ ತಜ್ಞರಿಗೂ ಹೇಳಲು ಮತ್ತು ಕೇಳಲು ಮೋದಿ ಅವಕಾಶ ನೀಡಿದರು. ಅಲ್ಲದೇ ತಜ್ಞರ ಮಾತುಗಳನ್ನು ಬಹಳ ಸೂಕ್ಷ್ಮವಾಗಿ ಆಲಿಸಿ ಅವುಗಳಿಗೆ ಪ್ರತಿಕ್ರಿಯಿಸಿದರು. ಈ ನಿಟ್ಟಿನಲ್ಲಿ ನಮಗೆ ತುಂಬಾ ನಮ್ರತೆ ಇದೆ" ಎಂದು ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಅಬ್ರಾಹ್ಮ್ಸ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು, "ನ್ಯೂಯಾರ್ಕ್ ನಗರದಲ್ಲಿ, ಶಿಕ್ಷಣತಜ್ಞರ ಗುಂಪಿನೊಂದಿಗೆ ಸಂವಾದ ನಡೆಸಲಾಯಿತು. ಕೌಶಲ್ಯ ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸಿ ಭಾರತದಲ್ಲಿ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂಬುದರ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಾನು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿವರ್ತಕ ಸಾಮರ್ಥ್ಯದ ಬಗ್ಗೆ ಮಾತನಾಡಿದೆ". ಎಂದು ಟ್ವೀಟ್ ಮಾಡಿದ್ದಾರೆ