ಕರ್ನಾಟಕ

karnataka

ETV Bharat / international

PM Modi US Visit: 'ನಾನು ಮೋದಿ ಅವರ ಅಭಿಮಾನಿ': ಟ್ವಿಟರ್​​ ಸಿಇಒ ಎಲಾನ್ ಮಸ್ಕ್ - PM Modi US Visit

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿಯಾದರು. ಈ ವೇಳೆ, ಎಲೋನ್ ಮಸ್ಕ್ ಅವರು 'ನಾನು ಮೋದಿ ಅವರ ಅಭಿಮಾನಿ' ಎಂದು ಹೇಳಿದ್ದಾರೆ

Elon Musk PM Modi
ಎಲಾನ್ ಮಸ್ಕ್ ಹಾಗೂ ನರೇಂದ್ರ ಮೋದಿ

By

Published : Jun 21, 2023, 6:56 AM IST

Updated : Jun 21, 2023, 9:07 AM IST

ನ್ಯೂಯಾರ್ಕ್‌: 'ನಾನು ಮೋದಿಯವರ ಅಭಿಮಾನಿ' ಎಂದು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಹೇಳಿದ್ದಾರೆ. ಇಂದು ನ್ಯೂಯಾರ್ಕ್‌ನಲ್ಲಿ ಪ್ರಧಾನಿಯನ್ನು ಭೇಟಿಯಾದ ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿರುವುದಾಗಿ ಇದೇ ವೇಳೆ ಮಸ್ಕ್​ ಹೇಳಿದರು.

"ಭಾರತದ ಭವಿಷ್ಯದ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ವಿಶ್ವದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚಿನ ಭರವಸೆಯನ್ನು ಹೊಂದಿದೆ. ಅವರು (ಪ್ರಧಾನಿ ಮೋದಿ) ನಿಜವಾಗಿಯೂ ಭಾರತದ ಬಗ್ಗೆ ಕಾಳಜಿ ವಹಿಸುತ್ತಾರೆ ಏಕೆಂದರೆ ಮೋದಿ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ನಾನು ಮೋದಿಯವರ ಅಭಿಮಾನಿ. ಅದೊಂದು ಅದ್ಭುತ ಸಭೆ ಮತ್ತು ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ" ಎಂದು ಮಸ್ಕ್​ ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ: "ಮೋದಿ ಅವರು ಮುಕ್ತವಾಗಿರಲು ಬಯಸುತ್ತಾರೆ. ಹೊಸ ಕಂಪನಿಗಳಿಗೆ ಬೆಂಬಲ ನೀಡಲು ಬಯಸುತ್ತಾರೆ. ನಾನು ತಾತ್ಕಾಲಿಕವಾಗಿ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದೇನೆ. ಆ ದೇಶಕ್ಕೆ ಹೋಗಲು ನಾನು ಎದುರು ನೋಡುತ್ತಿದ್ದೇನೆ. ಭಾರತಕ್ಕೂ ಸಹ ಸ್ಟಾರ್‌ಲಿಂಕ್ ಅನ್ನು ತರಲು ನಾವು ಆಶಾದಾಯಕವಾಗಿ ಎದುರು ನೋಡುತ್ತಿದ್ದೇವೆ. ಸ್ಟಾರ್‌ಲಿಂಕ್ ಇಂಟರ್ನೆಟ್ ಇದು ಭಾರತದ ದೂರದ ಅಥವಾ ಗ್ರಾಮೀಣ ಭಾಗಗಳಿಗೆ ಹೆಚ್ಚು ಸಹಾಯಕವಾಗಿದೆ ಎಂದು ಅವರು ಹೇಳಿದರು. ಸೌರಶಕ್ತಿ ಹೂಡಿಕೆಗೆ ಭಾರತ ಉತ್ತಮ ತಾಣವಾಗಿದೆ . ಪ್ರಧಾನಿ ಜತೆಗಿನ ಮಾತುಕತೆ ಅತ್ಯುತ್ತಮವಾಗಿತ್ತು" ಎಂದು ಮಸ್ಕ್​ ಬಣ್ಣಿಸಿದ್ದಾರೆ.

ಅದ್ಭುತ ಭೇಟಿ:ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಪ್ರಬಂಧಕಾರ ಮತ್ತು ಸಂಖ್ಯಾಶಾಸ್ತ್ರಜ್ಞ ಪ್ರೊಫೆಸರ್ ನಾಸಿಮ್ ನಿಕೋಲಸ್ ತಾಲೇಬ್, "ನಾನು ಪ್ರಧಾನ ಮಂತ್ರಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾವು ಸಭೆ ನಡೆಸಿದ್ದೇವೆ. ಅವರು(ಪ್ರಧಾನಿ) ಆಂಟಿಫ್ರೇಜಿಲ್ ಅನ್ನು ಪ್ರಸ್ತಾಪಿಸಿದರು. ನಾವು ಪ್ರತಿಕೂಲತೆಯಿಂದ ಸಹಜ ಸ್ಥಿತಿಗೆ ಮರಳುವ ಬಗ್ಗೆ ಮಾತನಾಡಿದ್ದೇವೆ. ಇದು ಅದ್ಭುತ ಭೇಟಿಯಾಗಿದೆ. ಕೋವಿಡ್‌ಗೆ ಪ್ರತಿಕ್ರಿಯೆ ಮತ್ತು ಭಾರತವು ಅದನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಿದೆ ಎಂಬುದರ ಬಗ್ಗೆ ನಾನು ಭಾರತವನ್ನು ಶ್ಲಾಘಿಸಿದೆ" ಎಂದರು.

20ಕ್ಕೂ ಹೆಚ್ಚು ಚಿಂತನಶೀಲ ನಾಯಕರ ಭೇಟಿ:ಅಮೆರಿಕ ಅಧ್ಯಕ್ಷ ಜೋ ಬೈಡನ್​ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಜೂನ್ 21-24 ರವರೆಗೆ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ, ನೊಬೆಲ್ ಪ್ರಶಸ್ತಿ ಪುರಸ್ಕೃತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳ 20ಕ್ಕೂ ಹೆಚ್ಚು ಚಿಂತನಶೀಲ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇವರಲ್ಲಿ ವಿದ್ವಾಂಸರು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರು ಸೇರಿದ್ದಾರೆ. ಮುಖ್ಯವಾಗಿ ಮಸ್ಕ್, ಖಗೋಳ ಭೌತಶಾಸ್ತ್ರಜ್ಞ ಮತ್ತು ಲೇಖಕ ನೀಲ್ ಡಿಗ್ರಾಸ್ ಟೈಸನ್, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪಾಲ್ ರೋಮರ್, ಲೇಖಕ ನಿಕೋಲಸ್ ನಾಸಿಮ್ ತಾಲೆಬ್ ಮತ್ತು ಹೂಡಿಕೆದಾರ ರೇ ಡಾಲಿಯೊ ಸೇರಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ವಿಶ್ವಸಂಸ್ಥೆಯ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರೊಂದಿಗೆ ಮೋದಿ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಿದ್ದಾರೆ. 188ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ:PM Modi US Visit: ಅಮೆರಿಕಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ.. ನಿರ್ಗಮನಕ್ಕೆ ಮುನ್ನ ಹೇಳಿದ್ದೇನು?

Last Updated : Jun 21, 2023, 9:07 AM IST

ABOUT THE AUTHOR

...view details