ಓಕ್ಸಾಕಾ( ಮೆಕ್ಸಿಕೋ): ಅಗಾಥಾ ಚಂಡಮಾರುತಕ್ಕೆ ಮೆಕ್ಸಿಕೋದ ಜನರು ತತ್ತರಿಸಿ ಹೋಗಿದ್ದಾರೆ. ಪ್ರವಾಹ ಮತ್ತು ಗುಡ್ಡ ಕುಸಿತದಿಂದಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 20 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ದಕ್ಷಿಣ ರಾಜ್ಯ ಓಕ್ಸಾಕಾದ ಗವರ್ನರ್ ಮಂಗಳವಾರ ಮಾಹಿತಿ ನೀಡಿದ್ದಾರೆ.
ಅಗಾಥಾ ಚಂಡಮಾರುತದಿಂದಾಗಿ ಅಪಾರ ಹಾನಿಯುಂಟು ಮಾಡಿದೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕ ಮನೆಗಳು, ರೆಸ್ಟೋರೆಂಟ್‌ಗಳು ನೆಲಸಮವಾಗಿವೆ. ವಸತಿ ಪ್ರದೇಶ ಮತ್ತು ರಸ್ತೆಗಳು ಜಲಾವೃತವಾಗಿದ್ದು, ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಜನ ಜೀವನಕ್ಕೆ ಅಡ್ಡಿಯಾಗಿದೆ ಎಂದು ಗವರ್ನರ್ ಅಲೆಜಾಂಡೋ ಮುರಾತ್ ಹೇಳಿದ್ದಾರೆ.
ವಿಪರೀತ ಮಳೆಯಿಂದಾಗಿ ನದಿಗಳು ತುಂಬಿ ತುಳುಕುತ್ತಿವೆ. ಅಷ್ಟೇ ಅಲ್ಲ ದಡಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ನದಿ ತೀರದ ವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಅನೇಕ ಜನರು ಮಣ್ಣಿನಡಿ ಸಿಲುಕಿದ್ದಾರೆ ಎಂದು ಗವರ್ನರ್ ಹೇಳಿದ್ದಾರೆ.
ಹುವಾಟುಲ್ಕೊ ರೆಸಾರ್ಟ್ ಬಳಿ ಮೂವರು ಮಕ್ಕಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ. ಓಕ್ಸಾಕಾದಲ್ಲಿನ ಸಣ್ಣ ಕಡಲತೀರದ ಪಟ್ಟಣಗಳಲ್ಲಿ ಭೂಕುಸಿತವಾಗಿದೆ. ಇದು ಪ್ರಬಲವಾದ ವರ್ಗ 2 ಚಂಡಮಾರುತವಾಗಿದ್ದು, ಗರಿಷ್ಠ 105 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಅಗಾಥಾ ಚಂಡಮಾರುತ ಮಂಗಳವಾರ ಈಶಾನ್ಯಕ್ಕೆ ವೆರಾಕ್ರಜ್ ರಾಜ್ಯಕ್ಕೆ ಚಲಿಸುತ್ತಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಗವರ್ನರ್ ಮಾಹಿತಿ ನೀಡಿದ್ದಾರೆ.
ಕರಾವಳಿಯ ಸಮೀಪವಿರುವ ಕೆಲವು ಸಮುದಾಯಗಳಿಗೆ ವಿದ್ಯುತ್ ಅನ್ನು ಮರುಸ್ಥಾಪಿಸಲಾಗಿದೆ. ಕೆಲವು ಸೇತುವೆಗಳು ಕೊಚ್ಚಿಹೋಗಿವೆ. ಮಣ್ಣಿನ ಕುಸಿತಗಳಿಂದಾಗಿ ಹಲವಾರು ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿವೆ ಎಂದು ಮುರಾತ್ ಹೇಳಿದರು