ಇಸ್ಲಾಮಾಬಾದ್ (ಪಾಕಿಸ್ತಾನ): ಬಲೂಚ್ ನಾಗರಿಕರ ಬಲವಂತದ ಕಣ್ಮರೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ 50ನೇ ದಿನ ದಾಟಿ ಮುಂದುವರೆದಿರುವ ಮಧ್ಯೆ ಬಲೂಚ್ ಕಾರ್ಯಕರ್ತರಾದ ಮಹರಂಗ್ ಬಲೂಚ್ ಮತ್ತು ಸಮ್ಮಿ ದೀನ್ ಬಲೂಚ್ ಅವರು ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗಿ ಬಲೂಚಿಸ್ತಾನದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
ವಿಶ್ವಸಂಸ್ಥೆಯ ನಿಯೋಗದಲ್ಲಿ ಪಾಕಿಸ್ತಾನದಲ್ಲಿನ ವಿಶ್ವಸಂಸ್ಥೆ ಮಿಷನ್ನ ಉನ್ನತ ಅಧಿಕಾರಿಗಳು, ಯುಎನ್ ಮಿಷನ್ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಮಾಜಿ ಮುಖ್ಯಸ್ಥ ಮಿಯೋ ಸಾಟೊ, ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಅಧಿಕಾರಿ ಶಾ ನಾಸಿರ್ ಖಾನ್ ಮತ್ತು ವಿಶ್ವಸಂಸ್ಥೆಯ ಸಂವಹನ ಸಲಹೆಗಾರ ಮರಿಯಮ್ ಶೇಖ್ ಭಾಗಿಯಾಗಿದ್ದರು.
ಬಲವಂತದ ಕಣ್ಮರೆ, ಕಾನೂನುಬಾಹಿರ ಹತ್ಯೆಗಳು ಮತ್ತು ಬಲೂಚ್ ಹಕ್ಕುಗಳಿಗಾಗಿ ಪ್ರತಿಪಾದಿಸುವ ಶಾಂತಿಯುತ ಪ್ರತಿಭಟನಾಕಾರರನ್ನು ದಮನಿಸುವುದು ಸೇರಿದಂತೆ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿವರಗಳನ್ನು ಬಲೂಚ್ ಕಾರ್ಯಕರ್ತರು ವಿಶ್ವಸಂಸ್ಥೆಯ ಮುಂದೆ ಪ್ರಸ್ತುತಪಡಿಸಿದರು. ಬಲೂಚಿಸ್ತಾನ್ ಪೋಸ್ಟ್ ಪ್ರಕಾರ, ಪ್ರತಿಭಟನೆಗಳು ಮತ್ತು ಧರಣಿಗಳ ಸಮಯದಲ್ಲಿ ಬಲೂಚ್ ಪ್ರತಿಭಟನಾಕಾರರು ಎದುರಿಸುತ್ತಿರುವ ಬೆದರಿಕೆಗಳನ್ನು ಪ್ರಮುಖವಾಗಿ ಎತ್ತಿ ತೋರಿಸಲಾಗಿದೆ. ಮಹರಂಗ್ ಬಲೂಚ್ ಮತ್ತು ಸಮ್ಮಿ ದೀನ್ ಬಲೂಚ್ ಅವರು ಮಾಡಿದ ಆರೋಪಗಳನ್ನು ವಿಶ್ವಸಂಸ್ಥೆ ಅಧಿಕಾರಿಗಳು ಒಪ್ಪಿಕೊಂಡರು ಎಂದು ವರದಿಯಾಗಿದೆ.
ಮುಂದಿನ ಕ್ರಮಕ್ಕಾಗಿ ವಿಶ್ವಸಂಸ್ಥೆ ಸಂಬಂಧಿತ ಇಲಾಖೆಗಳೊಂದಿಗೆ ಸಮಸ್ಯೆಗಳನ್ನು ಚರ್ಚಿಸಲಾಗುವುದು ಎಂದು ಅಧಿಕಾರಿಗಳು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಯುಎನ್ ಅಧಿಕಾರಿಗಳು ಮತ್ತು ಬಲೂಚ್ ಕಾರ್ಯಕರ್ತರ ನಡುವೆ ನಡೆದ ಸಭೆ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಬಲೂಚ್ ಯಕ್ ಜೆಹ್ತಿ ಸಮಿತಿ (ಬಿವೈಸಿ) ಕೈಗೊಂಡ ಉಪಕ್ರಮವಾಗಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.