ಕರ್ನಾಟಕ

karnataka

ETV Bharat / international

ವೆಸ್ಟ್​ ಬ್ಯಾಂಕ್​ನಲ್ಲಿ ಮಾನವ ಹಕ್ಕುಗಳು ಸಂಪೂರ್ಣ ಕ್ಷೀಣಿಸುತ್ತಿವೆ: ವಿಶ್ವಸಂಸ್ಥೆ - Hamas Israel conflict

ಪ್ಯಾಲೆಸ್ಟೀನಿಯನ್ನರ ಹತ್ಯೆ ಹಾಗೂ ಅವರ ಮೇಲಿನ ಹಿಂಸಾಚಾರ ಕೊನೆಗೊಳಿಸುವಂತೆ ಇಸ್ರೇಲ್​ಗೆ ವಿಶ್ವಸಂಸ್ಥೆ ಕರೆ ನೀಡಿದೆ.

Etv Bharat
ವೆಸ್ಟ್​ ಬ್ಯಾಂಕ್​ನಲ್ಲಿ ಮಾನವ ಹಕ್ಕುಗಳು ಸಂಪೂರ್ಣ ಕ್ಷೀಣಿಸುತ್ತಿವೆ: ವಿಶ್ವಸಂಸ್ಥೆ ವರದಿ

By ANI

Published : Dec 29, 2023, 10:59 AM IST

ಜಿನೀವಾ (ಸ್ವಿಟ್ಜರ್ಲೆಂಡ್): ''ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ವೆಸ್ಟ್​ ಬ್ಯಾಂಕ್​ನಲ್ಲಿ ಮಾನವ ಹಕ್ಕುಗಳ ಸ್ಥಿತಿಯು ತೀವ್ರವಾಗಿ ಹದಗೆಡುತ್ತಿದೆ'' ಎಂದು ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ.

ಕಾನೂನುಬಾಹಿರವಾಗಿ ಪ್ಯಾಲೆಸ್ಟೀನಿಯನ್ನರ ಹತ್ಯೆ ಮತ್ತು ಅವರ ಮೇಲಿನ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಇಸ್ರೇಲ್​ಗೆ ವಿಶ್ವಸಂಸ್ಥೆ ಕರೆ ನೀಡಿದೆ. ಕಾನೂನು ಜಾರಿ ಕಾರ್ಯಾಚರಣೆಗಳ ಸಮಯದಲ್ಲಿ ಮಿಲಿಟರಿ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ಬಳಕೆಯನ್ನು ತಕ್ಷಣವೇ ಅಂತ್ಯಗೊಳಿಸಬೇಕು. ಜೊತೆಗೆ ಅನಿಯಂತ್ರಿತ ಬಂಧನ ಮತ್ತು ಪ್ಯಾಲೆಸ್ಟೀನಿಯನ್ನರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಕೊನೆಗೊಳಿಸಬೇಕು ಎಂದು ಯುಎನ್​ ವರದಿ ತಿಳಿಸಿದೆ.

ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಮತ್ತು ಇತರ ಪ್ಯಾಲೇಸ್ಟಿನಿಯನ್ ಸಶಸ್ತ್ರ ಗುಂಪುಗಳ ದಾಳಿಯಿಂದ ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಅಕ್ಟೋಬರ್ 7ರಿಂದ ಡಿಸೆಂಬರ್ 27 ರವರೆಗೆ 79 ಮಕ್ಕಳು ಸೇರಿದಂತೆ 300 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಇಸ್ರೇಲಿ ಭದ್ರತಾ ಪಡೆಗಳು ಕನಿಷ್ಠ 291 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ.

"ಕಾನೂನು ಜಾರಿ ಸಂದರ್ಭಗಳಲ್ಲಿ ಮಿಲಿಟರಿ ಕಾರ್ಯತಂತ್ರಗಳು ಮತ್ತು ಶಸ್ತ್ರಾಸ್ತ್ರಗಳ ಬಳಕೆ, ಅನಗತ್ಯ ಅಥವಾ ಅಸಮಾನ ಬಲದ ಬಳಕೆ ಮತ್ತು ಪ್ಯಾಲೆಸ್ಟೀನಿಯನ್ನರ ಮೇಲೆ ಪರಿಣಾಮ ಬೀರುವ ಅನಿಯಂತ್ರಿತ ಮತ್ತು ತಾರತಮ್ಯದ ನಿರ್ಬಂಧಗಳನ್ನು ಜಾರಿಗೊಳಿಸುವುದು ಅತ್ಯಂತ ತೊಂದರೆದಾಯಕವಾಗಿದೆ" ಎಂದು ಯುಎನ್​ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್ ಆತಂಕ ವ್ಯಕ್ತಪಡಿಸಿದರು.

"ಇಸ್ರೇಲ್​ನಿಂದ ವೆಸ್ಟ್​ ಬ್ಯಾಂಕ್​ನ ಮೇಲೆ ದೀರ್ಘಾವಧಿಯ ಆಕ್ರಮಣ ನಡೆದಿದೆ. ಅಲ್ಲದೆ, ಕಾನೂನು ಉಲ್ಲಂಘನೆಗಳು ಹಲವು ವರ್ಷಗಳಿಂದ ಮುಂದುವರೆದಿದೆ'' ಎಂದು ಯುಎನ್​ ವರದಿ ತಿಳಿಸಿದೆ. ಪ್ಯಾಲೆಸ್ಟೀನ್​ ಜನರ ವಿರುದ್ಧ ಇಸ್ರೇಲ್​ ಸೇನೆಯ ಹಿಂಸಾಚಾರವನ್ನು ಕೊನೆಗೊಳಿಸಬೇಕು, ಇಸ್ರೇಲಿ ಭದ್ರತಾ ಪಡೆಗಳ ಎಲ್ಲಾ ಹಿಂಸಾಚಾರದ ಬಗ್ಗೆ ತನಿಖೆ ಮಾಡಬೇಕು, ಯಾವುದೇ ರೀತಿಯ ಬಲವಂತದ ವಿರುದ್ಧ ಪ್ಯಾಲೇಸ್ಟಿನಿಯನ್ ಸಮುದಾಯಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ, ಸ್ಪಷ್ಟ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಸ್ತ್ರಸಜ್ಜಿತ ಇಸ್ರೇಲ್​ ಯೋಧರನ್ನು ತಾಯ್ನಾಡಿಗೆ ಮರಳಿ ಕರೆಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸಿದೆ.

ಅಕ್ಟೋಬರ್ 7ರಿಂದ ನವೆಂಬರ್ 20ರ ಅವಧಿಯಲ್ಲಿ ವಾಯುದಾಳಿಗಳಲ್ಲಿ ತೀವ್ರ ಹೆಚ್ಚಳವಾಗಿದೆ. ಜೊತೆಗೆ ಶಸ್ತ್ರಸಜ್ಜಿತ ಸಿಬ್ಬಂದಿಯ ವಾಹನಗಳು ವೆಸ್ಟ್​ ಬ್ಯಾಂಕ್​ನ ನಿರಾಶ್ರಿತರ ಶಿಬಿರಗಳು ಮತ್ತು ಇತರ ಜನನಿಬಿಡ ಪ್ರದೇಶಗಳಿಗೆ ಆಕ್ರಮಣ ಮಾಡಿರುವುದರಿಂದ ಸಾವು, ನೋವು ಸಂಭವಿಸಿವೆ. ನಾಗರಿಕ ಅಗತ್ಯ ವಸ್ತುಗಳು ಮತ್ತು ಮೂಲಸೌಕರ್ಯಗಳಿಗೂ ವ್ಯಾಪಕ ಹಾನಿ ಉಂಟಾಗಿದೆ. ಈ ಆಕ್ರಮಣಗಳಿಂದ ಅಕ್ಟೋಬರ್ 7ರಿಂದ ಕನಿಷ್ಠ 105 ಪ್ಯಾಲೆಸ್ಟೀನಿಯನ್ನರ ಸಾವಿಗೆ ಕಾರಣವಾಗಿದ್ದು, ಅವರಲ್ಲಿ 23 ಮಕ್ಕಳು ಮೃತಪಟ್ಟಿದ್ದಾರೆ ಎಂದಿದೆ.

ಅಕ್ಟೋಬರ್ 19 ಮತ್ತು 20 ರಂದು ತುಲ್ಕರೆಮ್‌ನ ನೂರ್ ಶಮ್ಸ್ ನಿರಾಶ್ರಿತರ ಶಿಬಿರ ಮೇಲೆ ಇಸ್ರೇಲಿ ಪಡೆಗಳು ದಾಳಿ ಮಾಡಿವೆ. ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು 14 ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಲಾಗಿದೆ. ಜೊತೆಗೆ ಆರು ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಗಾಯಗೊಂಡಿದ್ದರು. ಜೊತೆಗೆ, 10 ಪ್ಯಾಲೆಸ್ಟೀನಿಯನ್ನರನ್ನು ಬಂಧಿಸಲಾಗಿದೆ ಎಂದು ಯುಎನ್​ ವರದಿ ಹೇಳಿದೆ.

''ಇಸ್ರೇಲ್​​ ಭದ್ರತಾ ಪಡೆಗಳು ಪೂರ್ವ ಜೆರುಸಲೇಂ ಸೇರಿದಂತೆ ವೆಸ್ಟ್​ ಬ್ಯಾಂಕ್​ನಲ್ಲಿ ಸುಮಾರು 40 ಪತ್ರಕರ್ತರು ಸೇರಿದಂತೆ 4,700 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಬಂಧಿಸಿವೆ. ಕೆಲವರನ್ನು ಬೆತ್ತಲೆಯಾಗಿ, ಕಣ್ಣುಮುಚ್ಚಿ ಮತ್ತು ಕೈಕೋಳದಿಂದ ಮತ್ತು ಕಾಲುಗಳನ್ನು ಕಟ್ಟಿಕೊಂಡು ದೀರ್ಘ ಗಂಟೆಗಳ ಕಾಲ ತಡೆಹಿಡಿಯಲಾಗಿದೆ. ಜೊತೆಗೆ ಇಸ್ರೇಲಿ ಸೈನಿಕರು ಮನಬಂದಂತೆ ಹಲ್ಲೆ ಮಾಡಿದ್ದಾರೆ'' ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಭಾಗಶಃ ಕದನವಿರಾಮ ಪ್ರಸ್ತಾಪಿಸಿದ ಇಸ್ರೇಲ್; ಒತ್ತೆಯಾಳು ಬಿಡಲ್ಲ ಎಂದ ಹಮಾಸ್

ABOUT THE AUTHOR

...view details