ಜಿನೇವಾ:ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಮರ ಮೇಲೆ ಚೀನಾ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವುದರ ಕುರಿತು ವಿಶ್ವಸಂಸ್ಥೆ ಹೊಸ ವರದಿ ಬಹಿರಂಗಪಡಿಸಿದೆ. ಮೇ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ಮಾನವ ಹಕ್ಕುಗಳ ಯುಎನ್ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಅವರು ತಮ್ಮ ನಾಲ್ಕು ವರ್ಷಗಳ ಅಧಿಕಾರವಧಿ ಕೊನೆಗೊಳ್ಳುವ ಕೆಲವೇ ನಿಮಿಷಗಳ ಮೊದಲು ಬುಧವಾರ ವರದಿ ಬಿಡುಗಡೆ ಮಾಡಿದ್ದಾರೆ.
ಚೀನಾ ಬಗ್ಗೆ ತುಂಬಾ ಮೃದು ಧೋರಣೆ ಹೊಂದಿರುವುದಕ್ಕಾಗಿ ಮಿಚೆಲ್ ಬ್ಯಾಚೆಲೆಟ್ ಕೆಲವು ರಾಜತಾಂತ್ರಿಕರು ಮತ್ತು ಹಕ್ಕುಗಳ ಗುಂಪುಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ನಂತರದ ಮಹತ್ವದ ಬೆಳವಣಿಗೆಯಲ್ಲಿ ವರದಿ ಸಲ್ಲಿಸಿರುವ ಅವರು, ಕ್ಸಿನ್ಜಿಯಾಂಗ್ನಲ್ಲಿ ಗಂಭೀರ ಮಾನಹಕ್ಕುಗಳ ಉಲ್ಲಂಘನೆಯಾಗಿದೆ. ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ವರದಿ ಪ್ರಕಟಿಸಿದ್ದು, ಸರ್ಕಾರದ ಭಯೋತ್ಪಾದನೆ ಮತ್ತು ಪ್ರತಿ ಉಗ್ರವಾದ ತಂತ್ರಗಳನ್ನೂ ಅವರು ಉಲ್ಲೇಖಿಸಿದ್ದಾರೆ.
ಬಲವಂತದ ವೈದ್ಯಕೀಯ ಚಿಕಿತ್ಸೆ, ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ನೀತಿಗಳನ್ನು ಚೀನಾ ಜಾರಿ ಮಾಡುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರ್ಬಂಧಿಸಲು ಅಸ್ಪಷ್ಟ ರಾಷ್ಟ್ರೀಯ ಭದ್ರತಾ ಕಾನೂನುಗಳನ್ನು ಬಳಸುತ್ತಿದೆ. ತನಿಖಾಧಿಕಾರಿಗಳು ಚೀನಾ ವಿರೋಧದ ನಡುವೆಯೂ ಅಲ್ಲಿನ ಅಪರಾಧಗಳ ಕುರಿತು ವಿಶ್ವಾಸಾರ್ಹ ಪುರಾವೆಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುದೀರ್ಘವಾದ ವರದಿಯನ್ನು ಪ್ರಕಟಿಸಿರುವ ಮಿಚೆಲ್ ಬ್ಯಾಚೆಲೆಟ್, ತರಬೇತಿ ಕೇಂದ್ರಗಳು, ಜೈಲುಗಳಲ್ಲಿ ಬಂಧಿತರಾಗಿರುವ ಎಲ್ಲರನ್ನು ಬಿಡುಗಡೆ ಮಾಡಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಚೀನಾ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.