ನ್ಯೂಯಾರ್ಕ್(ಅಮೆರಿಕ): ಥೈಲ್ಯಾಂಡ್‌ನ ಈ ಚಿಕ್ಕ ಅಕ್ವೇರಿಯಂ ಮೀನಿನ ದೇಹದ ಒಳ ಭಾಗವನ್ನು ನಾವು ನೋಡಬಹುದು. ಇದರ ಚರ್ಮವು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಈ ಮೀನಿನ ದೇಹದ ಮೇಲೆ ಸರಿಯಾಗಿ ಬೆಳಕು ಬಿದ್ದಾಗ ಅದರ ದೇಹವು ಕಾಮನಬಿಲ್ಲಿನ ಬಣ್ಣಗಳಿಂದ ಮಿನುಗುತ್ತದೆ. ಈಗ ವಿಜ್ಞಾನಿಗಳು ಘೋಸ್ಟ್ ಕ್ಯಾಟ್ಫಿಶ್ ಎಂದು ಕರೆಯಲ್ಪಡುವ ಈ ಮೀನು ತನ್ನ ದೇಹದಲ್ಲಿ ವರ್ಣವೈವಿಧ್ಯದ ಹೊಳಪನ್ನು ಹೇಗೆ ಸೃಷ್ಟಿಸುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ.
ಥೈಲ್ಯಾಂಡ್‌ನ ನದಿಗಳಲ್ಲಿ ಕಂಡುಬರುವ ಘೋಸ್ಟ್ ಕ್ಯಾಟ್ಫಿಶ್:ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಸೋಮವಾರ ಪ್ರಕಟವಾದ ಅಧ್ಯಯನದ ಪ್ರಕಾರ ಆ ಹೊಳಪು ಒಳಗಿನಿಂದ ಬರುತ್ತದೆ. ಮೀನಿನ ಚರ್ಮದ ಮೂಲಕ ಬೆಳಕು ಹಾದುಹೋಗುವಾಗ, ಸ್ನಾಯುಗಳಲ್ಲಿನ ಸಣ್ಣ ರಚನೆಗಳಿಗೆ ಬೆಳಕು ಅಪ್ಪಳಿಸುತ್ತದೆ. ನಂತರ ಅವು ಬೆಳಕನ್ನು ವರ್ಣರಂಜಿತ ವರ್ಣಪಟಲವಾಗಿ ಪರಿವರ್ತಿಸುತ್ತವೆ. ಈ ಘೋಸ್ಟ್ ಕ್ಯಾಟ್ಫಿಶ್ಗಳನ್ನು, ಗ್ಲಾಸ್ ಕ್ಯಾಟ್ಫಿಶ್ ಎಂದು ಕರೆಯಲಾಗುತ್ತದೆ. ಈ ಮೀನುಗಳು ಥೈಲ್ಯಾಂಡ್‌ನ ನದಿಗಳಲ್ಲಿ ಕಂಡುಬರುವ ಸ್ಥಳೀಯವಾದ ಸಣ್ಣ ಜಾತಿಯ ಮೀನುಗಳಾಗಿವೆ. ಇವು ಸರಾಸರಿ ಕೆಲವು ಇಂಚುಗಳು (ಸೆಂಟಿಮೀಟರ್‌ಗಳು) ಉದ್ದವಿರುತ್ತವೆ. ಈ ಮೀನುಗಳನ್ನು ಪ್ರಪಂಚದಾದ್ಯಂತ ಅಕ್ವೇರಿಯಂ ಮೀನು ಎಂದು ಮಾರಾಟ ಮಾಡಲಾಗುತ್ತದೆ.
ಪ್ರಪಂಚದಲ್ಲಿ ಇತರ ಜೀವಿಗಳು ಸಹ ವರ್ಣವೈವಿಧ್ಯವನ್ನು ಹೊಂದಿದ್ದು, ನೀವು ಚಲಿಸುವಾಗ ಬಣ್ಣಗಳು ಬದಲಾಗುವ ಮಿನುಗುವ ಮಳೆಬಿಲ್ಲಿನ ಪರಿಣಾಮವನ್ನು ಸೃಷ್ಟಿಸುತ್ತವೆ. ಸಾಮಾನ್ಯವಾಗಿ, ಅವುಗಳು ಬೆಳಕನ್ನು ಪ್ರತಿಬಿಂಬಿಸುವ ಹೊಳೆಯುವ ಹೊರ ಮೇಲ್ಮೈಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಹಮ್ಮಿಂಗ್ ಹಕ್ಕಿಯ ಗರಿಗಳು ಅಥವಾ ಚಿಟ್ಟೆಯ ರೆಕ್ಕೆಗಳಂತೆ ಎಂದು ಸಂಶೋಧನೆಯಲ್ಲಿ ಭಾಗಿಯಾದ ಅರಿಜೋನಾ ಸ್ಟೇಟ್ ಯೂನಿವರ್ಸಿಟಿ ಜೀವಶಾಸ್ತ್ರಜ್ಞ ರಾನ್ ರುಟೊವ್ಸ್ಕಿ ವಿವರಿಸಿದರು.