ಮೆಟಾ ಕಂಪನಿಯ ಸಿಇಓ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಕುಟುಂಬಕ್ಕೆ ನೀಡಲಾಗುವ ಭದ್ರತಾ ವೆಚ್ಚ ಹೆಚ್ಚಿಸಲಾಗಿದೆ. ಮೆಟಾ ಕಂಪನಿಯು ಬುಧವಾರ ಜುಕರ್‌ಬರ್ಗ್ ಅವರ ಭದ್ರತಾ ಭತ್ಯೆಯನ್ನು 4 ಮಿಲಿಯನ್ ಡಾಲರ್ನಿಂದ 14 ಮಿಲಿಯನ್ ಡಾಲರ್ಗೆ ಏರಿಸಿದೆ.
ವಿಶ್ವದ 16ನೇ ಶ್ರೀಮಂತ ವ್ಯಕ್ತಿ: ಜುಕರ್‌ಬರ್ಗ್ ಪ್ರಸ್ತುತ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದ್ದಾರೆ ಮತ್ತು 63 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. 2021ರ ವರ್ಷಕ್ಕೆ, ಇವರು ಸರಿಸುಮಾರು 27 ಮಿಲಿಯನ್ ಡಾಲರ್ ಗಳಿಸಿದ್ದಾರೆ. 2022ರ ಆದಾಯವನ್ನು ಅವರು ಬಹಿರಂಗಪಡಿಸಿಲ್ಲ.
ಉದ್ಯೋಗ ಕಡಿತ ಸಾಧ್ಯತೆ: ಮುಂಬರುವ ವಾರಗಳಲ್ಲಿ ಕಂಪನಿಯು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಹೆಚ್ಚಿದೆ. ಕಂಪನಿಯು ಹೆಚ್ಚುವರಿ ವೆಚ್ಚಗಳನ್ನು ನಿಭಾಯಿಸಲು ಈ ಕಾರ್ಯಕ್ಕೆ ಮುಂದಾಗಲಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದ 2023ರ ಅನೇಕ ವಿಭಾಗಗಳ ಬಜೆಟ್ ಅನ್ನು ಕಂಪನಿಯು ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ. ಇದು ಸಾಮಾನ್ಯವಾಗಿ ವರ್ಷದ ಆರಂಭದಲ್ಲಿ ಸ್ಪಷ್ಟವಾಗಿರುತ್ತದೆ. ಇದು ಮುಂಬರುವ ಹೆಚ್ಚಿನ ಉದ್ಯೋಗಗಳಲ್ಲಿ ವಜಾಗೊಳಿಸುವ ಊಹಾಪೋಹಗಳಿಗೆ ಕಾರಣವಾಗಿದೆ. ಮೆಟಾ ಕಳೆದ ವರ್ಷ ನವೆಂಬರ್‌ನಲ್ಲಿ 11,000 ಉದ್ಯೋಗಿಗಳನ್ನು ಅಂದ್ರೆ, ಜಾಗತಿಕ ಉದ್ಯೋಗಿಗಳ ಶೇ 13ರಷ್ಟು ವಜಾಗೊಳಿಸಿದೆ.
ಜುಕರ್‌ಬರ್ಗ್ 2004 ರಲ್ಲಿ ಹಾರ್ವರ್ಡ್‌ನಲ್ಲಿರುವ ಅವರ ಡಾರ್ಮ್ ರೂಮ್‌ನಲ್ಲಿ ತಮ್ಮ ಮೂವರು ಸ್ನೇಹಿತರೊಂದಿಗೆ (ಡೆಸ್ಟಿನ್ ಮೊಸ್ಕೊವಿಟ್ಜ್, ಎಡ್ವರ್ಡೊ ಸವೆರಿನ್ ಮತ್ತು ಕ್ರಿಸ್ ಹ್ಯೂಸ್) ಫೇಸ್‌ಬುಕ್ ಸ್ಥಾಪಿಸಿದ್ದರು. ಸೈಟ್‌ನ ಮೂಲ ಕಲ್ಪನೆಯು ಸಾಮಾಜಿಕ ನೆಟ್‌ವರ್ಕ್ ರಚಿಸುವುದಾಗಿತ್ತು. ಇದು ಹಾರ್ವರ್ಡ್ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪರಸ್ಪರ ಸಂಪರ್ಕಿಸಲು ಸಹಾಯ ಮಾಡಿತ್ತು. ಈ ಸೈಟ್ ತ್ವರಿತವಾಗಿ ಜನಪ್ರಿಯತೆ ಗಳಿಸಿತ್ತು. ಇತರ ವಿಶ್ವವಿದ್ಯಾಲಯಗಳಿಗೂ ವಿಸ್ತರಿಸಿತ್ತು. ಕ್ರಮೇಣ ಬಳಕೆದಾರರ ಸಂಖ್ಯೆಯು ಪ್ರಪಂಚದಾದ್ಯಂತ 2.9 ಶತಕೋಟಿಗಿಂತ ಹೆಚ್ಚಾಯಿತು. ಸ್ವಲ್ಪ ಸಮಯದಲ್ಲೇ ಅದು ಜಾಗತಿಕ ವೇದಿಕೆಯಾಯಿತು. ಇದರೊಂದಿಗೆ, ಎರಡೂ ಸಾಮಾಜಿಕ ಮಾಧ್ಯಮ ದೈತ್ಯಗಳಾದ ವಾಟ್ಆ್ಯಪ್ ಮತ್ತು ಇನ್ಸ್ಟಾಗ್ರಾಮ್ ಸಹ ಅದರೊಂದಿಗೆ ಸೇರಿಕೊಂಡಿತು.
ಮಾರ್ಕ್ ಜುಕರ್‌ಬರ್ಗ್ ನಾಯಕತ್ವ:ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ಗೆ ಪ್ರಾರಂಭದಿಂದಲೂ ಸಿಇಓ ಆಗಿದ್ದಾರೆ. ಅವರು ತಮ್ಮ ಉದ್ಯಮಶೀಲತಾ ಮನೋಭಾವ ಮತ್ತು ಯಶಸ್ವಿ ಕಂಪನಿಯನ್ನು ನಿರ್ಮಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಮಾರ್ಕ್ ನಾಯಕತ್ವದಲ್ಲಿ ಫೇಸ್‌ಬುಕ್ ಸಣ್ಣ ಸ್ಟಾರ್ಟ್‌ಅಪ್‌ನಿಂದ ಜಾಗತಿಕ ಸಾಮಾಜಿಕ ಮಾಧ್ಯಮ ದೈತ್ಯವಾಗಿ ಬೆಳೆದಿದೆ. ಬಳಕೆದಾರರ ಡೇಟಾವನ್ನು ಫೇಸ್‌ಬುಕ್ ನಿರ್ವಹಿಸುತ್ತಿದೆ.
ಇದನ್ನೂ ಓದಿ:ಟ್ವಿಟರ್‌ನ ಹೊಸ ಸಿಇಒ ಪರಿಚಯಿಸಿದ ಬಿಲಿಯನೇರ್ ಎಲೋನ್ ಮಸ್ಕ್!