ಹಾಂಕಾಂಗ್: ಚೀನಾ ಈ ಬಾರಿ 60 ವರ್ಷಗಳಲ್ಲಿಯೇ ಅತ್ಯಧಿಕ ಬಿಸಿಲಿನ ತಾಪವನ್ನು ಎದುರಿಸುತ್ತಿದೆ. ಚೀನಾದ ಹಲವಾರು ನಗರಗಳಲ್ಲಿನ ತಾಪಮಾನದ ಮಟ್ಟ 40 ಡಿಗ್ರಿ ಸೆಲ್ಸಿಯಸ್ (104 ಡಿಗ್ರಿ ಫ್ಯಾರನ್‌ಹೀಟ್) ದಾಟಿದ್ದು, ಅನಿವಾರ್ಯವಾಗಿ ಹಲವಾರು ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ದೇಶಾದ್ಯಂತ ಮೈಸುಡುವ ಗಾಳಿ ಬೀಸುತ್ತಿರುವ ಮಧ್ಯೆ ವಿದ್ಯುಚ್ಛಕ್ತಿ ಕೊರತೆ ಎದುರಾಗಿರುವುದರಿಂದ ಸಿಚುವಾನ್ ಪ್ರಾಂತ್ಯದಲ್ಲಿ ಆರು ದಿನಗಳ ಕಾಲ ಎಲ್ಲ ಕಾರ್ಖಾನೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಸಿಚುವಾನ್ ಸೆಮಿಕಂಡಕ್ಟರ್ ಮತ್ತು ಸೋಲಾರ್ ಪ್ಯಾನಲ್ ಉದ್ಯಮಗಳಿಗೆ ಪ್ರಮುಖ ಉತ್ಪಾದನಾ ಸ್ಥಳವಾಗಿದೆ. ಆ್ಯಪಲ್ ಕಂಪನಿಗೆ (AAPL) ಪೂರೈಕೆದಾರರಾದ ಫಾಕ್ಸ್‌ಕಾನ್ ಮತ್ತು ಇಂಟೆಲ್ (INTC) ಸೇರಿದಂತೆ ವಿಶ್ವದ ಕೆಲವು ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳಿಗೆ ಸೇರಿದ ಕಾರ್ಖಾನೆಗಳಿಗೆ ವಿದ್ಯುತ್ ಕಡಿತವು ತೀವ್ರ ಹೊಡೆತ ನೀಡಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಿಚುವಾನ್ ಪ್ರಾಂತ್ಯವು ಚೀನಾದ ಲಿಥಿಯಂ ಗಣಿಗಾರಿಕೆ ಕೇಂದ್ರವಾಗಿದೆ. ಎಲೆಕ್ಟ್ರಿಕ್ ಕಾರ್ ಬ್ಯಾಟರಿಗಳ ತಯಾರಿಕೆಯಲ್ಲಿ ಲಿಥಿಯಂ ಪ್ರಮುಖವಾಗಿ ಬೇಕಾಗುತ್ತದೆ. ಹೀಗಾಗಿ ಲಿಥಿಯಂ ಕೊರತೆಯಾದಲ್ಲಿ ಕಚ್ಚಾ ವಸ್ತುಗಳ ಬೆಲೆ ಕೂಡ ಹೆಚ್ಚಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ವಿಪರೀತ ಶಾಖದ ಕಾರಣದಿಂದ ಕಚೇರಿಗಳು ಮತ್ತು ಮನೆಗಳಲ್ಲಿ ಹವಾನಿಯಂತ್ರಕ ಯಂತ್ರಗಳ ಬಳಕೆ ಹೆಚ್ಚಾಗಿದೆ. ಇದರಿಮದ ವಿದ್ಯುತ್ ಜಾಲದ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ. ಇನ್ನು ಜಲಕ್ಷಾಮದಿಂದ ನದಿ ನೀರಿನ ಮಟ್ಟ ಕಡಿಮೆಯಾಗಿದ್ದು, ಜಲವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ.
ದೇಶದ ಹಲವು ಪ್ರಾಂತ್ಯಗಳಲ್ಲೂ ಬಿಸಿಗಾಳಿಯ ಅಬ್ಬರ:ಸಿಚುವಾನ್ ಹೊರತುಪಡಿಸಿ ಜಿಯಾಂಗ್ಸು, ಅನ್ಹುಯಿ ಮತ್ತು ಝೆಜಿಯಾಂಗ್ ಸೇರಿದಂತೆ ಚೀನಾದ ಇತರ ಪ್ರಮುಖ ಪ್ರಾಂತ್ಯಗಳಲ್ಲಿ ಬಿಸಿಗಾಳಿಯ ಹೊಡೆತ ಎದುರಾಗಿದೆ. ಈ ಎಲ್ಲ ಪ್ರಾಂತ್ಯಗಳಲ್ಲಿ ವಿದ್ಯುತ್ ಕೊರತೆ ಎದುರಾಗಿರುವುದರಿಂದ ವಿದ್ಯುತ್ ಉಳಿತಾಯದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಉಳಿತಾಯ ಮಾಡುವ ಸಲುವಾಗಿ ಕಚೇರಿಗಳು ತಮ್ಮ AC ತಾಪಮಾನವನ್ನು 26 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಿಸುವಂತೆ ಅಥವಾ ಮೊದಲ ಮೂರು ಮಹಡಿಗಳಿಗೆ ಲಿಫ್ಟ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.