ಮೆಕ್ಸಿಕೋ ನಗರ : ಮೆಕ್ಸಿಕೋ ಸಿಟಿ ಸಮೀಪದ ಪ್ರಸಿದ್ಧ ಟಿಯೋಟಿಹುಕಾನ್ ಪುರಾತತ್ವ ಸ್ಥಳದಲ್ಲಿ ಹಾರಾಡುತ್ತಿದ್ದ ಹಾಟ್ ಏರ್ ಬಲೂನ್ನಲ್ಲಿ (Hot Air Balloon) ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿದರು ಎಂದು ಅಲ್ಲಿನ ಸರ್ಕಾರದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಲೂನ್‌ನಿಂದ ಜಿಗಿದಿದ್ದರು.
ಮೃತರನ್ನು 39 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ಪುರುಷನ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು, ಆತನ ಬಲ ತೊಡೆ ಎಲುಬು ಮುರಿದಿದೆ. ಬಲೂನ್‌ನಲ್ಲಿದ್ದ ಇತರೆ ಪ್ರಯಾಣಿಕರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಬಲೂನ್ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ನೋಡಬಹುದು.
ಟಿಯೋಟಿಹುಕಾನ್ ಬಗ್ಗೆ..: ಟಿಯೋಟಿಹುಕಾನ್ ಎಂಬುದು ಒಂದು ಜನಪ್ರಿಯ ಪ್ರವಾಸಿ ತಾಣ. ಹಿಸ್ಪಾನಿಕ್ ಪೂರ್ವದ ನಗರ ಟಿಯೋಟಿಹುವಾಕಾನ್ ಅನ್ನು 1987 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಮೆಕ್ಸಿಕೋ ನಗರದ ಈಶಾನ್ಯಕ್ಕೆ ಸುಮಾರು 45 ಮೈಲುಗಳಷ್ಟು (70 ಕಿಲೋಮೀಟರ್) ದೂರದಲ್ಲಿದೆ. ಇಲ್ಲಿನ ಸಂಸ್ಕೃತಿ ಮತ್ತು ವಾಸ್ತುಶಿಲ್ಪವು ಓಲ್ಮೆಕ್ ನಾಗರಿಕತೆಯಿಂದ ಹೆಚ್ಚು ಪ್ರಭಾವಿತವಾಗಿದೆ. ಅಷ್ಟೇ ಅಲ್ಲದೇ, ಇಲ್ಲಿ ಸೂರ್ಯನ ಪಿರಮಿಡ್ ಅನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ:ಹಾಟ್ ಏರ್ ಬಲೂನ್ ಏರಿ ಆಗಸದಲ್ಲಿ ಹಾರ ಬದಲಾಯಿಸಿದ ನವಜೋಡಿ.. ವಿಡಿಯೋ