ಹಾಂಕಾಂಗ್:ದಕ್ಷಿಣ ಚೀನಾದ ಆರ್ಥಿಕ ಕೇಂದ್ರವಾಗಿರುವ ಹಾಂಕಾಂಗ್‌ನಲ್ಲಿ ಭಾರೀ ಮಳೆ ಬೀಳುತ್ತಿದೆ. ರಸ್ತೆಗಳು ಮತ್ತು ಸುರಂಗಮಾರ್ಗಗಳು ಜಲಾವೃತಗೊಂಡಿದ್ದರಿಂದ ಶುಕ್ರವಾರ ಬೆಳಗ್ಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಂಕಾಂಗ್ ಮಹಾನಗರವು 140 ವರ್ಷಗಳಲ್ಲಿ ಈ ಪ್ರಮಾಣದ ಮಳೆಯನ್ನು ಕಂಡಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಜನರನ್ನು ರಕ್ಷಿಸಲು ಅಧಿಕಾರಿಗಳು ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮಳೆಯಿಂದಾಗಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 83 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ವಿಭಾಗದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಈ ನಗರದಲ್ಲಿ ಸುಮಾರು 75 ಲಕ್ಷ ಜನರು ವಾಸಿಸುತ್ತಿರುವುದು ಗಮನಾರ್ಹ.
ಭುಗಿಲೆದ್ದ ಪ್ರವಾಹ..:ಗುರುವಾರ ರಾತ್ರಿ 11 ರಿಂದ 12 ರ ನಡುವೆ 158.1 ಮಿಲಿಮೀಟರ್ (6.2 ಇಂಚು) ಮಳೆಯಾಗಿದೆ. 1884ರ ನಂತರ ಒಂದು ಗಂಟೆಯಲ್ಲಿ ಸುರಿದ ಅತಿ ಹೆಚ್ಚು ಮಳೆ ಇದಾಗಿದೆ. ಕೌಲೂನ್ ನಗರದ ಉತ್ತರ ಭಾಗದಲ್ಲಿ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿಯ ನಡುವೆ 200 ಮಿಲಿಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ನಗರದ ಕೆಲವೆಡೆ 19.5 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇತ್ತೀಚಿಗೆ ಪ್ರಬಲವಾದ ಚಂಡಮಾರುತದಿಂದ ಚೇತರಿಸಿಕೊಳ್ಳುತ್ತಿರುವ ನಗರಕ್ಕೆ ಹೊಸ ಪ್ರವಾಹಗಳು ತಲೆ ಬಿಸಿ ಮಾಡಿವೆ.
ಶುಕ್ರವಾರದ ಪ್ರವಾಹದಿಂದಾಗಿ ನಗರದ ಹಲವೆಡೆ ಸಾರಿಗೆ ಸೇವೆಗಳು ಮತ್ತು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ. ನಗರದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ನೆಚ್ಚರಿಕೆಯನ್ನು ಗುರುವಾರ ಸಂಜೆ ಹೊರಡಿಸಲಾಗಿದೆ. ಹಾಂಕಾಂಗ್ನ ಷೇರು ಮಾರುಕಟ್ಟೆ ಕೂಡ ಬೆಳಗಿನ ವಹಿವಾಟ ಸ್ಥಗಿತಗೊಳಿಸಲಾಗಿತ್ತು. ಅಗತ್ಯ ನೌಕರರನ್ನು ಮಾತ್ರ ಕಚೇರಿಗಳಿಗೆ ಕರೆಸಿಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಉಳಿದವರು ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು ಎಂದು ಹೇಳಿದೆ.
ವಾಂಗ್ಟೈ ಜಿಲ್ಲೆಯ ರೈಲ್ವೆ ನಿಲ್ದಾಣವೊಂದು ಮುಳುಗಡೆಯಾಗಿದೆ. ಇದರಿಂದ ರೈಲ್ವೆ ಇಲಾಖೆಯೂ ಸಂಚಾರ ಸ್ಥಗಿತಗೊಂಡಿದೆ. ಮತ್ತೊಂದೆಡೆ ಬಸ್ಸುಗಳೂ ಎಲ್ಲೆಂದರಲ್ಲಿ ನಿಂತಿದ್ದವು. ಸಂಜೆಯವರೆಗೂ ಪ್ರವಾಹದ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನಗರದಿಂದ ಕೌಲೂನ್ ಪರ್ಯಾಯ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಜಲಾವೃತಗೊಂಡಿದೆ.
ದಕ್ಷಿಣ ಚೀನಾ 71 ವರ್ಷಗಳ ಬಳಿಕ ಇಂತಹ ಮಳೆ: ಮತ್ತೊಂದೆಡೆ, ದಕ್ಷಿಣ ಚೀನಾದ ಶೆನ್‌ಜೆನ್ ನಗರದಲ್ಲಿಯೂ ಭಾರಿ ಮಳೆಯಾಗುತ್ತಿದೆ. 1952ರ ನಂತರ ಈ ಪ್ರಮಾಣದ ಮಳೆ ದಾಖಲಾಗಿರುವುದು ಇದೇ ಮೊದಲಂತೆ. ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನೂರಾರು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹದ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಚೀನಾದ ದಕ್ಷಿಣ ಭಾಗವು ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆ ಹೊಂದಿದೆ.
ಓದಿ:ಪ್ರಪಂಚಕ್ಕೆ ಶಾಕ್ ನೀಡಿದ ಉತ್ತರ ಕೊರಿಯಾ: ನ್ಯೂಕ್ಲಿಯರ್ ಅಟ್ಯಾಕ್ ಸಬ್ಮೆರಿನ್ಗೆ ಚಾಲನೆ!