ಖೈಬರ್ ಪಖ್ತುಂಖ್ವಾ (ಪಾಕಿಸ್ತಾನ):ಭಯೋತ್ಪಾದಕರ ಸ್ವರ್ಗ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದಾಳಿ, ದೌರ್ಜನ್ಯ ಹೆಚ್ಚುತ್ತಿರುವ ನಡುವೆ ಹೆಮ್ಮೆಯ ಸಂಗತಿಯೊಂದು ಹೊರಬಿದ್ದಿದೆ. ಇದೇ ಮೊಟ್ಟ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಮುಂಬರುವ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯಿಂದ ಅವರು ಕಣಕ್ಕಿಳಿಯಲಿದ್ದಾರೆ. ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಿಂದ ನಾಮಪತ್ರ ಸಲ್ಲಿಸಿದ್ದಾರೆ.
ಸವೀರಾ ಪ್ರಕಾಶ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಹೆಮ್ಮೆಯ ಹಿಂದೂ. 16ನೇ ರಾಷ್ಟ್ರೀಯ ಅಸೆಂಬ್ಲಿಗೆ 2024ರ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಜೊತೆ ಗುರುತಿಸಿಕೊಂಡಿರುವ ಸವೀರಾ ಅವರು, ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಬುನೇರ್ ಜಿಲ್ಲೆಯ PK-25 ಕ್ಷೇತ್ರದಿಂದ ಅವರು ಸಾಮಾನ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗೆ ವೈದ್ಯಕೀಯ ಸೇವೆಯಿಂದ ನಿವೃತ್ತರಾಗಿರುವ ಸವೀರಾ ಅವರ ತಂದೆ ಓಂ ಪ್ರಕಾಶ್ ಅವರು ಕಳೆದ 35 ವರ್ಷಗಳಿಂದ ಪಿಪಿಪಿ ಪಕ್ಷದ ಸದಸ್ಯರಾಗಿದ್ದಾರೆ.
ಸವೀರಾ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಕ್ವಾಮಿ ವತನ್ ಪಕ್ಷದ ನಾಯಕ ಸಲೀಮ್ ಖಾನ್ ಎಂಬುವರು ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಬುನರ್‌ನಿಂದ ಸವೀರಾ ಪ್ರಕಾಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ.