ಇಸ್ಲಾಮಾಬಾದ್(ಪಾಕಿಸ್ತಾನ):ಭಾರಿ ಪ್ರವಾಹದಿಂದ ಪಾಕಿಸ್ತಾನ ತಲ್ಲಣಿಸಿದೆ. ದೇಶದ ಇತಿಹಾಸದಲ್ಲಿಯೇ ಸುರಿದ ಅತಿ ಹೆಚ್ಚು ಮಳೆಯಿಂದಾಗಿ ದೇಶದ ಸುಮಾರು ಅರ್ಧದಷ್ಟು ಭೂಮಿ ಪ್ರವಾಹದಲ್ಲಿ ಮುಳುಗಿದೆ. ಮಹಾ ಪ್ರವಾಹದಿಂದ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.
ದಿಕ್ಕು ತೋಚದ ಸ್ಥಿತಿಯಲ್ಲಿರುವ ಹಲವು ಜನರಿಗೆ ಹಿಂದೂ ದೇವಾಲಯವೊಂದು ಆಶ್ರಯ ನೀಡುತ್ತಿದೆ. ಬಲೂಚಿಸ್ತಾನದಲ್ಲಿರುವ ಒಂದು ಸಣ್ಣ ಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಮಳೆ ಹಾನಿ ಮಾಡಿಲ್ಲ. ಇದೀಗ ಈ ದೇಗುಲ 200 ರಿಂದ 300 ಜನರಿಗೆ ಆಶ್ರಯ ನೀಡುತ್ತಿದೆ. ಹೀಗೆ ಆಶ್ರಯ ಪಡೆದವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂಬುದು ಗಮನಾರ್ಹ.
ಬಾಬಾ ಮಾಧೋ ದಾಸ್ ಎಂಬ ದೇವಸ್ಥಾನವು ಬಲೂಚಿಸ್ತಾನದ ಕಚ್ ಜಿಲ್ಲೆಯ ಜಲಾಲ್ ಖಾನ್ ಎಂಬ ಸಣ್ಣ ಹಳ್ಳಿಯಲ್ಲಿದೆ. ನಾರಿ, ಬೋಲನ್ ಮತ್ತು ಲೆಹ್ರಿ ನದಿಗಳ ಪ್ರವಾಹದಿಂದಾಗಿ ಈ ಗ್ರಾಮ ಪ್ರಾಂತ್ಯದ ಉಳಿದ ಭಾಗಗಳಿಂದ ಸಂಪರ್ಕ ಕಡಿದುಕೊಂಡಿದೆ. ಆದರೆ, ಇಷ್ಟೊಂದು ಪ್ರವಾಹ ಬಂದರೂ ದೇವಸ್ಥಾನಕ್ಕೆ ನೀರು ನುಗ್ಗಿಲ್ಲ. ಸ್ಥಳೀಯ ಹಿಂದೂ ಸಮುದಾಯದವರು ಪ್ರವಾಹಪೀಡಿತರಿಗೆ ಸಹಾಯ ಮಾಡಲು ದೇವಾಲಯದ ಬಾಗಿಲು ತೆರೆದು ಆಶ್ರಯ ನೀಡಿದ್ದಾರೆ.
ಜಾತಿ, ಭೇದವಿಲ್ಲದೆ ಜನರು ಹಿಂದೂ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸ್ಥಳೀಯ ಹಿಂದೂಗಳು ಧ್ವನಿವರ್ಧಕದಲ್ಲಿ ಘೋಷಣೆ ಮಾಡಿ, ಮುಸ್ಲಿಮರು ದೇಗುಲದೊಳ ಬಂದು ಆಶ್ರಯ ಪಡೆಯುವಂತೆ ಮನವಿ ಮಾಡಿದ್ದಾರೆ. ಸಂಕಷ್ಟದ ಸಮಯದಲ್ಲಿ ನಮ್ಮ ಸಹಾಯಕ್ಕೆ ಧಾವಿಸಿ ಆಹಾರ ಮತ್ತು ವಸತಿ ಒದಗಿಸಿದ್ದಕ್ಕಾಗಿ ಸ್ಥಳೀಯ ಸಮುದಾಯಕ್ಕೆ ಋಣಿಯಾಗಿದ್ದೇವೆ ಎಂದು ಅಲ್ಲಿ ಆಶ್ರಯ ಪಡೆದವರು ಹೇಳಿದ್ದಾರೆ. ಇವರ ಜೊತೆ ಸಾಕು ಪ್ರಾಣಿಗಳೂ ಸಹ ಆಶ್ರಯ ಪಡೆಯುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ವರುಣನ ಆರ್ಭಟ : 937 ಜನರ ಸಾವು, ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ