ವಾಷಿಂಗ್ಟನ್: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ ಇನ್ನೇನು ಒಂದು ತಿಂಗಳು ಬಾಕಿ ಇದೆ. ಈ ಹಿನ್ನೆಲೆ ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿಅಮೆರಿಕದ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಅಮೆರಿಕನ್ನರು ಮೇರಿಲ್ಯಾಂಡ್‌ನ ಆಂಜನೇಯ ದೇವಾಲಯದಲ್ಲಿ ಸಂಭ್ರಮಿಸಿದ್ದಾರೆ. ಇಲ್ಲಿನ ಹಿಂದೂ ಜನತೆ ರಸ್ತೆಯಲ್ಲಿ ಕಾರು ಮತ್ತು ಬೈಕ್ ರ‍್ಯಾಲಿಯನ್ನು ಶನಿವಾರ ಆಯೋಜಿಸಿದ್ದರು.
ಈ ಕುರಿತು ಅಲ್ಲಿಯ ಸಂಘಟಕರೊಬ್ಬರು ಮಾತನಾಡಿ, ಹಿಂದೂಗಳ 500 ವರ್ಷಗಳ ಹೋರಾಟದ ನಂತರ ಭಗವಾನ್ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯಾಗುತ್ತಿದ್ದು, ಮುಂದಿನ ತಿಂಗಳು ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಸುಮಾರು 1,000 ಅಮೆರಿಕದ ಹಿಂದೂ ಕುಟುಂಬಗಳೊಂದಿಗೆ ಐತಿಹಾಸಿಕ ಆಚರಣೆಯನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಮ ಮಂದಿರದ ಪ್ರತಿಷ್ಠಾಪನೆ ಹಿನ್ನೆಲೆಯ ಆಚರಣೆಯಲ್ಲಿ ರಾಮ್ ಲೀಲಾ, ಶ್ರೀರಾಮನ ಕಥೆಗಳು, ಶ್ರೀರಾಮನಿಗಾಗಿ ಹಿಂದೂ ಪ್ರಾರ್ಥನೆಗಳು, ಭಗವಾನ್ ಶ್ರೀರಾಮನ ಭಜನೆ ಇರಲಿದೆ ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಮಹೇಂದ್ರ ಸಾಪಾ ತಿಳಿಸಿದ್ದಾರೆ. ಅಲ್ಲದೆ ಆಚರಣೆಯಲ್ಲಿ ಅಮೆರಿಕದ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸುಮಾರು 45 ನಿಮಿಷಗಳ ಕಾಲ ವಿವಿಧ ವಯೋಮಾನದ ಮಕ್ಕಳು ಶ್ರೀರಾಮ ದೇವರ ಜೀವನ ಕಥೆಯನ್ನಾಧರಿಸಿದ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಇನ್ನು ನಿನ್ನೆ ನಡೆದ ಸಂಭ್ರಮದಲ್ಲಿ ಸಹ-ಸಂಘಟಕ ಮತ್ತು ಸ್ಥಳೀಯ ತಮಿಳು ಹಿಂದೂ ನಾಯಕನಾಗಿರುವ ಪ್ರೇಮಕುಮಾರ್ ಸ್ವಾಮಿನಾಥನ್ ಎಂಬುವರು ತಮಿಳು ಭಾಷೆಯಲ್ಲಿ ಶ್ರೀರಾಮನನ್ನು ಸ್ತುತಿಸುವ ಹಾಡನ್ನು ಹಾಡಿದರು. ಅಲ್ಲದೆ ಅಮೆರಿಕದಲ್ಲಿ ಜನವರಿ 20 ರಂದು ನಡೆಯಲಿರುವ ಆಚರಣೆಗೆ ಮತ್ತು ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ಪ್ರತಿಷ್ಠಾಪನೆಗೆ ಎಲ್ಲರನ್ನು ಆಹ್ವಾನಿಸಿದರು.
ಇನ್ನು ಉಳಿದ ಇತರ ಸಂಘಟಕರು ಕನ್ನಡ, ತೆಲುಗು ಮತ್ತು ಇತರ ಭಾಷೆಗಳಲ್ಲಿ ಮಾತನಾಡಿ ವಿಶ್ವದಾದ್ಯಂತ ನೆಲೆಸಿರುವ ಹಿಂದೂಗಳಿಗೆ ಮಾದರಿಯಾಗಿರುವ ಭಗವಾನ್ ಶ್ರೀರಾಮನ ಮಹತ್ವವನ್ನು ವಿವರಿಸಿದರು.
ನಿಮಗೆ ತಿಳಿದಿರುವಂತೆ ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು 2024 ರ ಜನವರಿ 22 ರಂದು ನಡೆಯಲಿದೆ. ಈ ಸಮಾರಂಭಕ್ಕೆ ಸುಮಾರು 7000 ಗಣ್ಯರಿಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಮಂತ್ರಣಗಳನ್ನು ಕಳುಹಿಸಲಾಗಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ, ರತನ್ ಟಾಟಾ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಜನಪ್ರಿಯ ಟಿವಿ ಧಾರಾವಾಹಿ 'ರಾಮಾಯಣ'ದಲ್ಲಿ ರಾಮ ಮತ್ತು ಸೀತೆಯ ಪಾತ್ರ ನಿರ್ವಹಿಸಿದ ನಟರಾದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖ್ಲಿಯಾ ಅವರನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ:ಸೂರತ್ ಡೈಮಂಡ್ ಬೋರ್ಸ್ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ