ಕ್ವೆಟ್ಟಾ(ಪಾಕಿಸ್ತಾನ):ವಾರದ ಹಿಂದೆ ಅಪಹರಣಕ್ಕೊಳಗಾಗಿದ್ದ ಸೇನಾಧಿಕಾರಿ ಕರ್ನಲ್ ಲೈಕ್ ಬೇಗ್ ಮಿರ್ಜಾ ಅವರ ಮೃತದೇಹ ಗುರುವಾರ ಬಲೂಚಿಸ್ತಾನ್ ಪ್ರಾಂತ್ಯದ ಹೆದ್ದಾರಿಯಲ್ಲಿ ಪತ್ತೆಯಾಗಿದೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ.
ಕರ್ನಲ್ ಮಿರ್ಜಾ ತಮ್ಮ ಕುಟುಂಬದೊಂದಿಗೆ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಿಂದ ಸುಮಾರು 100 ಮೈಲಿ ದೂರದಲ್ಲಿರುವ ಜಿಯಾರತ್ಗೆ ಪ್ರವಾಸ ಹೊರಟಿದ್ದರು. ಇದಾದ ಬಳಿಕ ಉಗ್ರರು ಅವರನ್ನು ಅಪಹರಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾದವರ ಪತ್ತೆಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ.