ಟೆಲ್ ಅವಿವ್ (ಇಸ್ರೇಲ್):ಹಮಾಸ್ ದಾಳಿ ಮಾಡಿದ್ದಕ್ಕೆ ಪ್ರತಿದಾಳಿ ಮಾಡಲಾಗುತ್ತಿದೆ. ಆದರೆ, ಇದರಲ್ಲಿ ಮೂಗು ತೂರಿಸುತ್ತಿರುವ ಹಿಜ್ಬುಲ್ಲಾ ಬಂಡುಕೋರ ಪಡೆಯು ಯುದ್ಧವನ್ನು ಇನ್ನಷ್ಟು ವಿಸ್ತರಿಸುವ ಅಪಾಯಕಾರಿ ಆಟ ಆಡುತ್ತಿದೆ. ಲೆಬನಾನ್ ಯುದ್ಧದಲ್ಲಿ ಭಾಗಿಯಾಗುವಂತೆ ಮಾಡುತ್ತಿದೆ ಎಂದು ಇಸ್ರೇಲ್ ಸೇನೆ ಆರೋಪಿಸಿದೆ.
ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ಹೆಚ್ಚಿಸಿದ್ದಾರೆ. ನಾವೂ ಪ್ರತಿದಾಳಿ ನಡೆಸುತ್ತಿದ್ದೇವೆ. ಇದರಿಂದ ಲೆಬನಾನ್ ಕೂಡ ಯುದ್ಧದಲ್ಲಿ ಭಾಗಿಯಾಗುವಂತೆ ಹಿಜ್ಬುಲ್ಲಾ ಪ್ರೇರೇಪಿಸುವ ಮೂಲಕ ಅಪಾಯಕಾರಿ ಆಟವಾಡುತ್ತಿದೆ ಎಂದು ಇಸ್ರೇಲ್ ಭದ್ರತಾ ಪಡೆಗಳ ವಕ್ತಾರ ಜೊನಾಥನ್ ಕಾನ್ರಿಕಸ್ ಭಾನುವಾರ ಹೇಳಿದರು.
ಇಸ್ರೇಲ್ ಮತ್ತು ಲೆಬನಾನ್ ಗಡಿಯಾಚೆ ಗುಂಡಿನ ಚಕಮಕಿ ನಡೆಯುತ್ತಿದೆ. ಇದು ವ್ಯಾಪಕ ಸಂಘರ್ಷವನ್ನು ಹುಟ್ಟುಹಾಕುತ್ತಿದೆ. ಯುದ್ಧದಲ್ಲಿ ಭಾಗಿಯಾದಲ್ಲಿ ಲೆಬನಾನ್ ಏನನ್ನೂ ಪಡೆಯುವುದಿಲ್ಲ. ಬದಲಾಗಿ ತುಂಬಾ ಕಳೆದುಕೊಳ್ಳಲಿದೆ. ಲೆಬನಾನಿನ ಗುಂಪು ಹಮಾಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರಿಂದಾಗಿ ಹಿಂಸಾಚಾರ ಹೆಚ್ಚಾಗಿದೆ ಎಂದು ಇಸ್ರೇಲ್ ಸೇನಾಧಿಕಾರಿ ತಿಳಿಸಿದರು.
ಹಿಜ್ಬುಲ್ಲಾ ಯುದ್ಧಕ್ಕೆ ಪ್ರಚೋದನೆ ನೀಡಿ ದಾಳಿ ಮಾಡುತ್ತಿದ್ದರೂ, ನಾವು ಗಡಿಯ ಸಮೀಪವಿರುವ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿ ದಾಳಿ ಮಾಡುತ್ತಿದ್ದೇವೆ. ಹಿಜ್ಬುಲ್ಲಾ ಕ್ಷಿಪಣಿಗಳು, ರಾಕೆಟ್‌ಗಳು ಮತ್ತು ಯುಎವಿಗಳನ್ನು ಹಾರಿಸುತ್ತಿದೆ. ನಾವು ಟ್ಯಾಂಕ್‌ಗಳು, ಡ್ರೋನ್‌ಗಳು ಮಾತ್ರ ಬಳಸಿದ್ದೇವೆ. ಫಿರಂಗಿ ಮತ್ತು ಪದಾತಿದಳ ಸೇರಿದಂತೆ ಯಾವುದೇ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬಳಸಿಲ್ಲ ಎಂದು ಕಾನ್ರಿಕಸ್ ಹೇಳಿದರು.