ಕೀವ್, ಉಕ್ರೇನ್: ಕೀವ್ ಹೊರವಲಯದ ಬ್ರೋವರಿ ಪಟ್ಟಣದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ ಉಕ್ರೇನ್‌ನ ಆಂತರಿಕ ಸಚಿವರು ಮತ್ತು ಇತರ ಹಿರಿಯ ಅಧಿಕಾರಿಗಳು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ನರ್ಸರಿ ಮತ್ತು ವಸತಿ ಕಟ್ಟಡದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಕೀವ್ ಪ್ರದೇಶದ ಗವರ್ನರ್ ಬುಧವಾರ ಹೇಳಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ 10 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಇತರ ಎಂಟು ಮಂದಿ ಇದ್ದರು ಎಂದು ಉಕ್ರೇನ್‌ನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಹೋರ್ ಕ್ಲೈಮೆಂಕೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮ ಉಪ ಮಂತ್ರಿ ಯೆವ್ಹೆನ್ ಯೆನಿನ್ ಮತ್ತು ರಾಜ್ಯ ಕಾರ್ಯದರ್ಶಿ ಯೂರಿ ಲುಬ್ಕೋವಿಚ್ ಕೂಡ ಅಪಘಾತದಲ್ಲಿ ಅಸುನೀಗಿದ್ದಾರೆ ಎಂದು ಕ್ಲೈಮೆಂಕೊ ಹೇಳಿದರು.
ಗೃಹ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಯಾರು?: ಉಕ್ರೇನ್ ಗೃಹ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿಯನ್ನು 2021 ರಲ್ಲಿ ಝೆಲೆನ್ಸ್ಕಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಮತ್ತು ಝೆಲೆನ್ಸ್ಕಿಯ ಕ್ಯಾಬಿನೆಟ್ನಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದರು. ಉಕ್ರೇನ್‌ನೊಳಗಿನ ಪೊಲೀಸ್ ಮತ್ತು ಭದ್ರತೆಯ ಜವಾಬ್ದಾರಿಯನ್ನು ಹೊಂದಿದ್ದ ಮೊನಾಸ್ಟಿರ್ಸ್ಕಿ, ಯುದ್ಧ ಪ್ರಾರಂಭವಾದ ನಂತರ ಮೃತಪಟ್ಟ ಅತ್ಯಂತ ಹಿರಿಯ ಉಕ್ರೇನಿಯನ್ ಅಧಿಕಾರಿಯಾಗಿದ್ದಾರೆ. ಗೃಹ ಸಚಿವರನ್ನು ಹೊತ್ತ ಹೆಲಿಕಾಪ್ಟರ್ ಬ್ರೋವರಿ ಪಟ್ಟಣದ ಮೂಲಕ ಹಾದು ಹೋಗುವಾಗ ವಸತಿ ಕಟ್ಟಡದ ಬಳಿ ಅಪಘಾತಕ್ಕೀಡಾಗಿದೆ. ಮೊನಾಸ್ಟಿರ್ಸ್ಕಿಯ ಮೊದಲ ಸಚಿವ ಯೆವ್ಹೆನಿ ಯೆನಿನ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
’’ಬ್ರೋವರಿಯಲ್ಲಿನ ಕಡಿಮೆ ಗೋಚರತೆಯ ಕಾರಣದಿಂದ ಈ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರಬಹುದು ಪೀಟರ್ ಜಲ್ಮಾಯೆವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದಾಗ್ಯೂ, ಈ ಘಟನೆ ಬಹಳ ಅನುಮಾನಾಸ್ಪದವಾಗಿದೆ. ಕೃತ್ಯದ ಹಿಂದೆ ರಷ್ಯಾ ಒಕ್ಕೂಟದ ಸಂಭವನೀಯ ಭಯೋತ್ಪಾದಕ ಕೃತ್ಯವನ್ನು ತಳ್ಳಿಹಾಕುವುದಿಲ್ಲ‘‘ ಎಂದು ಯುರೇಷಿಯಾ ಡೆಮಾಕ್ರಸಿ ಇನಿಶಿಯೇಟಿವ್‌ನ ವಿಶ್ಲೇಷಕರು ಹೇಳಿದ್ದಾರೆ.