ಪೇಶಾವರ (ಪಾಕಿಸ್ತಾನ): ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ರಣ ಮಳೆಯಾಗಿದ್ದು, ಹಲವಾರು ಮನೆಗಳು ಕುಸಿದಿವೆ. ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. 145ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು, ಲಕ್ಕಿ ಮಾರ್ವತ್ ಮತ್ತು ಕರಕ್ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ ಎಂದು ರಕ್ಷಣಾಧಿಕಾರಿ ಖತೀರ್ ಅಹ್ಮದ್ ತಿಳಿಸಿದ್ದಾರೆ.
ಗಾಳಿಸಮೇತ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಬೇರುಸಹಿತ ಕಿತ್ತು ಧರೆಗುರುಳಿವೆ. ಹಲವು ವಿದ್ಯುತ್ ಕಂಬಗಳು ನೆಲಸಮವಾಗಿವೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಗಾಯಗೊಂಡವರಿಗೆ ತುರ್ತು ಪರಿಹಾರ ಮತ್ತು ಅವರ ರಕ್ಷಣೆಗೆ ಅಧಿಕಾರಿಗಳು ಕ್ರಮಗಳನ್ನು ಕೈಗೊಂಡಿದ್ದಾರೆ. ನೈಸರ್ಗಿಕ ವಿಕೋಪಗಳ ಪರಿಹಾರಕ್ಕಾಗಿ ಪಾಕ್ ಸರ್ಕಾರ ಶುಕ್ರವಾರ ವಿಶೇಷ ಬಜೆಟ್ ಮಂಡಿಸಿದೆ. ರಾಷ್ಟ್ರೀಯ ಬಜೆಟ್ ಕರಡು ಪ್ರತಿಯಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವಕ್ಕಾಗಿ 1.3 ಬಿಲಿಯನ್ ಯುಎಸ್ ಡಾಲರ್ ಹಣ ನಿಗದಿಪಡಿಸಿದೆ.
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಶನಿವಾರದ ಚಂಡಮಾರುತದಿಂದ ಜೀವಹಾನಿಯಾದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಪರಿಹಾರ ಕಾರ್ಯಾಚರಣೆಯ ವೇಗ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಜೊತೆಗೆ, ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಬಿಪರ್‌ಜೋಯ್ ಚಂಡಮಾರುತಕ್ಕೆ ಮುಂಚಿತವಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಇನ್ನು ಬಿಪರ್‌ಜೋಯ್ ಚಂಡಮಾರುತವು ಗಂಟೆಗೆ 150 ಕಿಲೋ ಮೀಟರ್ (ಗಂಟೆಗೆ 93 ಮೈಲುಗಳು) ವೇಗದಲ್ಲಿ ಪಾಕ್ ದೇಶದ ದಕ್ಷಿಣ ದಿಕ್ಕಿನೆಡೆಗೆ ಸಾಗುತ್ತಿದೆ ಎಂದು ಪಾಕಿಸ್ತಾನದ ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ.
ಈ ಹಿಂದಿನ ಮಳೆ ಅವಾಂತರಗಳು..: ಪಾಕಿಸ್ತಾನದಲ್ಲಿ ಹಿಂದಿನ ಮಳೆಯ ಅವಾಂತರಗಳನ್ನು ನೋಡುವುದಾದರೆ, ಕಳೆದ ವರ್ಷ ಪಾಕಿಸ್ತಾನದಲ್ಲಿ ಸುರಿದ ಮುಂಗಾರು ಮಳೆ ಮತ್ತು ಭೀಕರ ಪ್ರವಾಹವು ಅಪಾರ ನಷ್ಟವನ್ನುಂಟು ಮಾಡಿತ್ತು. ಅಂದಿನ ದಾಖಲೆ ಮಟ್ಟದ ವರ್ಷಧಾರೆಗೆ 1,700ಕ್ಕೂ ಹೆಚ್ಚಿನ ಜನರು ಸಾವಿಗೀಡಾಗಿದ್ದರು. ಸುಮಾರು 33 ಮಿಲಿಯನ್ ಜನಜೀವನದ ಮೇಲೆ ಮಳೆ ತೀವ್ರ ಪರಿಣಾಮ ಬೀರಿತ್ತು. 8 ಮಿಲಿಯನ್ ಜನರನ್ನು ಸ್ಥಳಾಂತರಗೊಳ್ಳುವಂತೆ ಮಾಡಿತ್ತು.