ಇಸ್ಲಮಾಬಾದ್: ಪಾಕಿಸ್ತಾನದ ಅಪ್ಪರ್ ಕೊಹಿಸ್ತಾನ್‌ನಲ್ಲಾದ ಹಠಾತ್ ಪ್ರವಾಹಕ್ಕೆ ಭಾನುವಾರ ಕನಿಷ್ಠ 50 ಮನೆಗಳು ಮತ್ತು ಲಘು ವಿದ್ಯುತ್ ಉತ್ಪಾದಕ ಕೇಂದ್ರಗಳು ಕೊಚ್ಚಿಹೋಗಿವೆ. ಕೊಹಿಸ್ತಾನ್ ಮೇಲ್ಭಾಗದ ಕಾಂಡಿಯಾ ಪ್ರದೇಶದಲ್ಲಿ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಪ್ರವಾಹ ಉಂಟಾಗಿದೆ ಎಂದು ಅಲ್ಲಿನ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಪಿಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.
ತಹಸೀಲ್ದಾರ್ (ಕಂದಾಯ ಅಧಿಕಾರಿ) ಮುಹಮ್ಮದ್ ರಿಯಾಝ್, ಕಳೆದ 24 ಗಂಟೆಗಳಲ್ಲಿ ಚಿತ್ರಾಲ್ ಮತ್ತು ಪೇಶಾವರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಪ್ಪರ್ ಕೊಹಿಸ್ತಾನ್‌ನಲ್ಲಿ ಸುಮಾರು 50 ಮನೆಗಳು ಪ್ರವಾಹದಲ್ಲಿ ಮುಳುಗಿವೆ. ಈಗಾಗಲೇ ಸಂತ್ರಸ್ತ ಕುಟುಂಬಗಳಿಗೆ 45 ಟೆಂಟ್‌ಗಳು ಮತ್ತು ಆಹಾರ ಪದಾರ್ಥಗಳನ್ನು ಹಾಗೂ ಇತರ ಅಗತ್ಯ ವಸ್ತುಗಳನ್ನು ಕಳುಹಿಸಿದ್ದು, ಪರಿಹಾರ ಕಾರ್ಯ ಮತ್ತು ನಷ್ಟದ ಮೌಲ್ಯಮಾಪನಕ್ಕಾಗಿ ಪೀಡಿತ ಪ್ರದೇಶಗಳಿಗೆ ಐದು ತಂಡಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.