ಮ್ಯಾಡ್ರಿಡ್:ಭಾರತದಾದ್ಯಂತ ಮಳೆ ಜೋರಾಗಿದ್ದರೆ, ಯೂರೋಪ್‌ನ ಸ್ಪೇನ್-ಪೋರ್ಚುಗಲ್ ದೇಶಗಳಲ್ಲಿ ಬಿಸಿಲು ಜನರ ಪ್ರಾಣ ತೆಗೆಯುತ್ತಿದೆ. ಸ್ಪೇನ್ನಲ್ಲಿ ಕಳೆದ ಒಂದು ವಾರದಲ್ಲಿ ತಾಪಮಾನ ಸಂಬಂಧಿತ ಕಾರಣಗಳಿಂದ 510 ಜನರು ಮೃತಪಟ್ಟಿದ್ದಾರೆ. ಅದರಲ್ಲೂ ಶನಿವಾರ(ಜು.16) ಒಂದೇ ದಿನದಲ್ಲಿ 150 ಜನರು ಸಾವಿಗೀಡಾಗಿರುವುದು ಭಾರಿ ಆತಂಕ ಉಂಟು ಮಾಡಿದೆ.
ದೇಶದ ಕೆಲವು ಭಾಗಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಜನರು ಅನಾರೋಗ್ಯಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಪೇನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಜುಲೈ 10 ಮತ್ತು 16 ರ ನಡುವೆ ಇದು ಅಧಿಕವಾಗಿದೆ ಎಂಬುದು ಸಚಿವಾಲಯದ ಮಾಹಿತಿ.
ಸಿಸ್ಟಮ್ ಆಫ್ ಮಾನಿಟರೈಸೇಶನ್ ಆಫ್ ಡೈಲಿ ಮಾರ್ಟಲಿಟಿ ಪ್ರಕಾರ, ದೇಶದಲ್ಲಿ ತಾಪಮಾನ ಉಲ್ಬಣಗೊಂಡಂತೆ ಶಾಖ ಸಂಬಂಧಿತ ಸಾವುಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಜುಲೈ 10 ರಿಂದ 13 ರವರೆಗಿನ ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ 15 ರಿಂದ 60 ಕ್ಕೆ ಅಂದರೆ, 4 ಪಟ್ಟು ಹೆಚ್ಚಾಗಿದೆ. ಗುರುವಾರ 93 ಆದರೆ, ಅದು ಶುಕ್ರವಾರಕ್ಕೆ 123 ಸಾವಿಗೆ ಏರಿಕೆ ಕಂಡಿತು. ಶನಿವಾರದಂದು 150 ಸಾವು ದಾಖಲಾಗಿ ಪರಾಕಾಷ್ಠೆಗೆ ತಲುಪಿದೆ ಎಂದು ಮಾಹಿತಿ ನೀಡಿದೆ.