ವಾಷಿಂಗ್ಟನ್ (ಅಮೆರಿಕ) :ಟೆಕ್ಸಾಸ್, ಲೂಸಿಯಾನಾ ಮತ್ತು ಫ್ಲೋರಿಡಾ ಸೇರಿದಂತೆ ದಕ್ಷಿಣ ಅಮೆರಿಕ ರಾಜ್ಯಗಳಲ್ಲಿ ಹೀಟ್ ವೇವ್ ತೀವ್ರವಾಗಿದೆ. ಇದರಿಂದ ಈ ಪ್ರದೇಶಗಳಲ್ಲಿನ 35 ಮಿಲಿಯನ್ಗಿಂತಲೂ ಅಧಿಕ ಜನ ಬಾಧಿತರಾಗಿದ್ದಾರೆ ಎಂದು ರಾಷ್ಟ್ರೀಯ ಹವಾಮಾನ ಸೇವೆ (ಎನ್ಡಬ್ಲ್ಯೂಎಸ್) ತಿಳಿಸಿದೆ. ಈ ಪ್ರಖರ ಶಾಖದ ಅಲೆಯು ಈ ವಾರ ಪೂರ್ತಿ ಇರಲಿದೆ ಎಂದು ಎನ್ಡಬ್ಲ್ಯೂಎಸ್ ಸೋಮವಾರದ ಮುನ್ಸೂಚನೆಯಲ್ಲಿ ತಿಳಿಸಿದೆ.
ಆಗ್ನೇಯ ಭಾಗದಾದ್ಯಂತ ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ, ಕೆಲವೆಡೆ ತೀವ್ರ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ. ನೈಋತ್ಯ ಭಾಗದಲ್ಲಿ ಬೆಂಕಿಯಂಥ ಹವಾಮಾನ ಪರಿಸ್ಥಿತಿಗಳು ಮುಂದುವರಿಯಲಿವೆ. ಬಿಸಿಲಿನ ಶಾಖದ ನಡುವೆ ಮಿಸಿಸಿಪ್ಪಿಯಲ್ಲಿ 49,000, ಒಕ್ಲಹೋಮದಲ್ಲಿ 1,87,000, ಟೆಕ್ಸಾಸ್ನಲ್ಲಿ ಸುಮಾರು 79,000 ಮತ್ತು ಲೂಸಿಯಾನದಲ್ಲಿ ಸುಮಾರು 69,000 ಜನರು ವಿದ್ಯುತ್ ಇಲ್ಲದೆ ಪರದಾಡಿದರು.
ಅರಿಝೋನಾದ ರಾಜ್ಯದ ರಾಜಧಾನಿ ಫೀನಿಕ್ಸ್ನಲ್ಲಿ ಜೂನ್ 18 ರಂದು 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಈವರೆಗಿನ ವರ್ಷದ ಅತ್ಯಧಿಕ ತಾಪಮಾನವಾಗಿದೆ. ಯುಎಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಕಾರ, ಹೀಟ್ ವೇವ್ಗಳ ಆವರ್ತನವು 1960 ರ ದಶಕದಲ್ಲಿ ವರ್ಷಕ್ಕೆ ಸರಾಸರಿ ಎರಡು ಶಾಖದ ಅಲೆಗಳಿಂದ 2010 ಮತ್ತು 2020 ರ ಅವಧಿಯಲ್ಲಿ ವರ್ಷಕ್ಕೆ ಆರರಷ್ಟಾಗಿವೆ.
ಹೀಟ್ ವೇವ್ ಎಂಬುದು ಸಾಮಾನ್ಯವಾಗಿರುವುದಕ್ಕಿಂತ ದೀರ್ಘಾವಧಿಯವರೆಗೆ ಅಸಹಜವಾಗಿರುವ ಹೆಚ್ಚಿನ ತಾಪಮಾನದ ಅವಧಿಯಾಗಿದೆ. ಈ ಸಮಯದಲ್ಲಿ ಶಾಖದ ಅಲೆಗಳು ಹಲವಾರು ದಿನಗಳಿಂದ ಹಲವಾರು ವಾರಗಳವರೆಗೆ ವ್ಯಾಪಿಸಬಹುದು ಮತ್ತು ಹವಾಮಾನ ಸಂಬಂಧಿತ ಸಾವುಗಳಿಗೆ ಕಾರಣವಾಗಬಹುದು. ಹೀಟ್ವೇವ್ಗಳು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತವೆ.
ಭಾರತದಲ್ಲೂ ಹೀಟ್ ವೇವ್ ಕಾಟ: ಕಳೆದ ವಾರದ ಅಂತ್ಯದಿಂದ ಪೂರ್ವ ಭಾರತದಲ್ಲಿ ಸುಮಾರು 100 ಜನ ಹೀಟ್ವೇವ್ಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ತಾಪಮಾನವು 43 ರಿಂದ 44C (109 - 111F) ಗಳಿಗೆ ಹೆಚ್ಚಾಗಿದ್ದರಿಂದ ಕಳೆದ ಮೂರು ದಿನಗಳಲ್ಲಿ ಬಲಿಯಾ ಪಟ್ಟಣದ 54 ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶದ ಜಿಲ್ಲಾ ವೈದ್ಯಕೀಯ ಅಧಿಕಾರಿ ವರದಿ ಮಾಡಿದ್ದಾರೆ. ಇನ್ನು ನೆರೆಯ ರಾಜ್ಯ ಬಿಹಾರದಲ್ಲಿ ಬಿಸಿಲಿನ ಹೊಡೆತ ತಾಳಲಾರದೆ 42 ಜನರು ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ವಿಪರೀತ ಶಾಖದ ಪರಿಣಾಮಗಳನ್ನು ಅಳೆಯುವುದು ಕಷ್ಟಕರವಾಗಿದೆ. ಉದಾಹರಣೆಗೆ, ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2020 ರಲ್ಲಿ 530 ಸಾವುಗಳು ಹೀಟ್ ವೇವ್ಗೆ ಸಂಬಂಧಿಸಿವೆ. ಆದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅದೇ ವರ್ಷ ಕೇವಲ ನಾಲ್ಕು ಹೀಟ್ ವೇವ್ ಸಾವುಗಳನ್ನು ದಾಖಲಿಸಿದೆ. ತೀವ್ರವಾದ ಶಾಖದ ಅಲೆಗಳು ಸೇರಿದಂತೆ ಹವಾಮಾನ ಬದಲಾವಣೆಯ ಪರಿಣಾಮಗಳು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಇದನ್ನೂ ಓದಿ: Interview: ವಿಶ್ವದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿದೆ ಭಾರತ: ಪ್ರಧಾನಿ ಮೋದಿ