ಹವಾಯಿ : ಈ ವಾರ ಅಮೆರಿಕದ ಹವಾಯಿ ದ್ವೀಪದ ಲಹೈನಾ ಪಟ್ಟಣದಲ್ಲಿ ವ್ಯಾಪಿಸಿದ ಕಾಳ್ಗಿಚ್ಚು ಕನಿಷ್ಠ 93 ಜನರನ್ನ ಬಲಿ ಪಡೆದುಕೊಂಡಿದೆ. ಲಹೈನಾ ಮತ್ತು ಅಪ್‌ಕಂಟ್ರಿ ಮಾಯಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯ ಜ್ವಾಲೆಗಳನ್ನು ನಂದಿಸಲು ಹರಸಾಹಸ ಮಾಡುತ್ತಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಸಮರೋಪಾದಿಯಲ್ಲಿ ಮುಂದುವರೆದಿದೆ ಎಂದು ಮಾಯಿ ಕೌಂಟಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಹವಾಯಿ ಗವರ್ನರ್ ಜೋಶ್ ಗ್ರೀನ್ ಅವರು ಮೃತರನ್ನು ಗುರುತಿಸಲು ಫೋರೆನ್ಸಿಕ್ ಕೆಲಸ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಬಹುದು ಎಂದು ಅವರು ತಿಳಿಸಿದ್ದಾರೆ. ಹಾಗೆಯೇ, ಮೃತಪಟ್ಟವರ ಗುರುತು ಪತ್ತೆ ಕಾರ್ಯ ಮುಂದುವರೆದಿದೆ. ಸಿಬ್ಬಂದಿ ಮತ್ತು ಶ್ವಾನ ದಳ ಘಟನಾ ಸ್ಥಳದಲ್ಲಿ ಹುಟುಕಾಟ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮಾಯಿ ಪಟ್ಟಣ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :Hawaii wildfire : ಶತಮಾನದ ಭೀಕರ ಕಾಡ್ಗಿಚ್ಚಿಗೆ ಹವಾಯಿ ದ್ವೀಪ ಭಸ್ಮ.. 89 ಮಂದಿ ಅಗ್ನಿಗಾಹುತಿ
ಹವಾಯಿ ಎದುರಿಸಿದ ಅತ್ಯಂತ ಕೆಟ್ಟ ನೈಸರ್ಗಿಕ ವಿಕೋಪಗಳಲ್ಲಿ ಇದು ಕೂಡ ಒಂದಾಗಿದೆ. ನಮಗೆ ಸಾಧ್ಯವಾದಷ್ಟು ಜನರನ್ನು ರಕ್ಷಿಸುವ ಮೂಲಕ ಅವರಿಗೆ ವಸತಿ, ಆರೋಗ್ಯ ಮತ್ತು ರಕ್ಷಣೆಯನ್ನು ನೀಡುವುದು ನಮ್ಮ ಆದ್ಯ ಕರ್ತವ್ಯ. ಹುಡುಕಾಟ ನಡೆಸಬೇಕಿರುವ ಸ್ಥಳ ಇನ್ನೂ 5 ಚದರ ಮೈಲಿಗಳಷ್ಟಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :Maui wildfires : ಹವಾಯಿಯಲ್ಲಿ ಕಾಳ್ಗಿಚ್ಚಿನ ಅಟ್ಟಹಾಸ.. ಈವರೆಗೆ 53 ಮಂದಿ ಅಗ್ನಿಗಾಹುತಿ
ಬೆಂಕಿ ಕಾಣಿಸಿಕೊಂಡಾಗಿನಿಂದ 2,000 ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ. ಇವುಗಳಲ್ಲಿ ಹೆಚ್ಚಿನವು ಲಹೈನಾ ಪ್ರದೇಶದಲ್ಲಿನ ಮನೆಗಳಾಗಿವೆ ಎಂದು ಬ್ರಿಟಿಷ್ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಹವಾಯಿ ದ್ವೀಪದಲ್ಲಿ ಈ ಬಾರಿ ಕಾಳ್ಗಿಚ್ಚಿನಿಂದ ಸಂಭವಿಸಿರುವ ಸಾವಿನ ಸಂಖ್ಯೆಯು 2018 ರ ಕ್ಯಾಲಿಫೋರ್ನಿಯಾದ ಕ್ಯಾಂಪ್ ಫೈರ್ ಅನ್ನು ಮೀರಿಸಿದೆ. ಕ್ಯಾಲಿಫೋರ್ನಿಯಾದಲ್ಲಿ 86 ಜನ ಸಾವನ್ನಪ್ಪಿದ್ದರು. 1918 ರಲ್ಲಿ ಉತ್ತರ ಮಿನ್ನೇಸೋಟದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದ ಸಾವಿರಾರು ಮನೆ, ನೂರಾರು ಜನರ ಅಸುನೀಗಿದ್ದರು.
ಹವಾಯಿಯಲ್ಲಿ ಇದೇ ತಿಂಗಳ 9 ನೇ ತಾರೀಖಿನಿಂದ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಕಾಳ್ಗಿಚ್ಚಿನ ಜ್ವಾಲೆ ಹಾಗೂ ಡೋರ ಚಂಡಮಾರುತ ದಕ್ಷಿಣ ಮಾರ್ಗವಾಗಿ ಸಾಗುತ್ತಿದ್ದು, ಮಾಯು ಮತ್ತು ಹವಾಯಿ ದ್ವೀಪವನ್ನು ಆವರಿಸಿದೆ. ದುರಂತದಲ್ಲಿ ಸುಟ್ಟು ಕರಕಲಾದ ಜನರನ್ನು ಗುರುತಿಸುವುದು ಅಸಾಧ್ಯವಾಗಿದೆ. ಇದಕ್ಕಾಗಿ ಡಿಎನ್ಎ ಟೆಸ್ಟ್ ನಡೆಸಲಾಗುತ್ತಿದೆ.
ಇದನ್ನೂ ಓದಿ :ಇನ್ನೂ ಶಾಂತವಾಗದ ಅಗ್ನಿಯ ರೋಷಾವೇಷ.. ಹವಾಯಿ ಕಾಳ್ಗಿಚ್ಚಿಗೆ 67 ಜನ ಬಲಿ !!
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈಗಾಗಲೇ ಹವಾಯಿ ಕಾಳ್ಗಿಚ್ಚನ್ನು ದೊಡ್ಡ ವಿಪತ್ತು ಎಂದು ಘೋಷಿಸಿದ್ದಾರೆ. ಕಳೆದುಕೊಂಡ ಅಮೂಲ್ಯ ಜೀವಗಳು ಮತ್ತು ಭೂಮಿ ನಾಶವಾದ ಕುರಿತು ಸಂತಾಪ ಸೂಚಿಸಿದ್ದಾರೆ. ಪ್ರೀತಿಪಾತ್ರರನ್ನು ಹಾಗೂ ಮನೆಯನ್ನು ಕಳೆದುಕೊಂಡವರಿಗೆ ಫೆಡರಲ್ ವಿಪತ್ತು ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.