ವಾಷಿಂಗ್ಟನ್: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಎರಡೂ ಕಡೆಗಳಿಂದ ನಡೆಯುತ್ತಿರುವ ಹಿಂಸಾಚಾರದ ಕೃತ್ಯಗಳನ್ನು ಸಮಾನವಾಗಿ ಖಂಡಿಸಿದ್ದಾರೆ. ತಮ್ಮ ಮಾಜಿ ಸಿಬ್ಬಂದಿ 'Pod Save America' ಸಂಸ್ಥೆಗಾಗಿ ನಡೆಸಿದ ಪಾಡ್ಕಾಸ್ಟ್ನಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ - ಹಮಾಸ್ ಸಮಸ್ಯೆ ನೂರು ವರ್ಷ ಹಳೆಯದಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳು ಈ ಬೆಂಕಿಗೆ ತುಪ್ಪ ಸುರಿಯುತ್ತಿವೆ ಮತ್ತು ದ್ವೇಷ ಹೆಚ್ಚಿಸುತ್ತಿವೆ ಎಂದು ಅವರು ಹೇಳಿದ್ದಾರೆ.
"ಈ ವಿಷಯದಲ್ಲಿ ನಾನು ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಈ ಸಮಸ್ಯೆಯ ನಿವಾರಣೆಗೆ ನಾನು ಮತ್ತೇನು ಮಾಡಬಹುದಿತ್ತು ಎಂದು ಪ್ರಶ್ನಿಸಿಕೊಳ್ಳುತ್ತೇನೆ. ನಾನು ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದು ನಿಜವಾದರೂ, ಅವುಗಳೆಲ್ಲದರ ಹೊರತಾಗಿ ನಾನು ಮತ್ತೇನೋ ಮಾಡಬಹುದಿತ್ತಾ ಎಂದು ನನ್ನ ಮನಸ್ಸು ನನಗೆ ಕೇಳುತ್ತಿರುತ್ತದೆ" ಎಂದು ಒಬಾಮಾ ಪಾಡ್ಕಾಸ್ಟ್ನಲ್ಲಿ ತಿಳಿಸಿದ್ದಾರೆ.
ಚಿಕಾಗೊದಲ್ಲಿ ಶುಕ್ರವಾರ ತಮ್ಮ ಮಾಜಿ ಸಿಬ್ಬಂದಿಗಳನ್ನು ಒಳಗೊಂಡ ಗುಂಪಿನೊಂದಿಗೆ ಸಂವಾದ ನಡೆಸಿದ ಅವರು, ಇಸ್ರೇಲ್-ಗಾಜಾ ಯುದ್ಧದ ಬಗ್ಗೆ ವಿವರವಾದ ವಿಶ್ಲೇಷಣೆ ಮಾಡಿದರು. ನಡೆಯುತ್ತಿರುವ ಹಿಂಸಾಚಾರದಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.