ಹಮಾಸ್ ಉಗ್ರರು ಬಿಡುಗಡೆ ಮಾಡಿದ ವಿಡಿಯೋ ನವದೆಹಲಿ:ಪ್ಯಾಲೆಸ್ಟೈನ್ನ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಪಡೆಗಳು ದಾಳಿ ಮುಂದುವರಿಸಿರುವ ನಡುವೆಯೇ, ಹಮಾಸ್ ಉಗ್ರರು ತಮ್ಮಲ್ಲಿರುವ ಒತ್ತೆಯಾಳುಗಳ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್ 7 ರಂದು ನಡೆಯುತ್ತಿದ್ದ ಸಂಗೀತೋತ್ಸವದ ಮೇಲೆ ದಾಳಿ ನಡೆಸಿದಾಗ ಅಪಹರಣಕ್ಕೊಳಗಾದ ಇಸ್ರೇಲಿಗರು ಇವರಾಗಿದ್ದಾರೆ.
ಹಮಾಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಗಾಯಗೊಂಡ ಒತ್ತೆಯಾಳು 21 ವರ್ಷದ ಯುವತಿಯ ತೋಳಿಗೆ ವೈದ್ಯರೊಬ್ಬರು ಚಿಕಿತ್ಸೆ ನೀಡುತ್ತಿರುವುದನ್ನು ತೋರಿಸಲಾಗಿದೆ. ಬಳಿಕ ತೀವ್ರ ಗಾಯಗೊಂಡಿರುವ ಆಕೆ ತನ್ನನ್ನು ಮಿಯಾ ಶೆಮ್ ಎಂದು ಪರಿಚಯಿಸಿಕೊಂಡು "ನಾನು ಗಾಜಾದಲ್ಲಿದ್ದು, ಇಲ್ಲಿದ್ದವರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ಎಲ್ಲವೂ ಚೆನ್ನಾಗಿದೆ" ಎಂದು ಹೇಳುತ್ತಾಳೆ.
"ನಾನು ಗಾಜಾದ ಆಸ್ಪತ್ರೆಯಲ್ಲಿದ್ದೇನೆ. ಹಮಾಸ್ ದಾಳಿಯ ದಿನದಂದು ಸಂಗೀತ ಕಾರ್ಯಕ್ರಮದಲ್ಲಿದೆ. ಆಗ ನನ್ನ ಕೈಗೆ ಗಂಭೀರ ಗಾಯವಾಯಿತು. ಇಲ್ಲಿಗೆ ನನ್ನನ್ನು ಕರೆದುಕೊಂಡು ಬರಲಾಗಿದೆ. 3 ಗಂಟೆಗಳ ಕಾಲ ನನ್ನ ಕೈಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಇಲ್ಲಿನವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಔಷಧಿ ನೀಡುತ್ತಿದ್ದಾರೆ. ಎಲ್ಲವೂ ಸರಿಯಾಗಿದೆ" ಎಂದೆಲ್ಲಾ ಆಕೆ ಹೇಳಿದ್ದಾಳೆ. ಇದನ್ನು ತನ್ನ ಸ್ಥಳೀಯ ಭಾಷೆಯಲ್ಲಿ ವಿವರಿಸಿದೆ.
"ನನ್ನನ್ನು ಆದಷ್ಟು ಬೇಗ ಮನೆಗೆ ಕರೆಯಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ. ನನ್ನ ಕುಟುಂಬ, ಹೆತ್ತವರು, ನನ್ನ ಒಡಹುಟ್ಟಿದವರು ದಯವಿಟ್ಟು ನಮ್ಮನ್ನೆಲ್ಲಾ ಇಲ್ಲಿಂದ ಆದಷ್ಟು ಬೇಗ ಕರೆದೊಯ್ಯಿರಿ" ಎಂದು ಆಕೆ ಕೋರಿದ್ದಾಳೆ.
ಒತ್ತೆಯಾಳುಗಳ ರಕ್ಷಣೆಗೆ ಒತ್ತು:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಂಡ ಬಳಿಕ ಶೆಮ್ ಮಿಯಾಳ ಅಪಹರಣದ ಬಗ್ಗೆ ಇಸ್ರೇಲ್ ಸೇನೆಯು ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದೆ. ಕಳೆದ ವಾರ ಮಿಯಾಳನ್ನು ಹಮಾಸ್ ಅಪಹರಿಸಿತ್ತು. ಸೇನಾ ಅಧಿಕಾರಿಗಳು ಮಿಯಾ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಮಾಸ್ ಪ್ರಕಟಿಸಿದ ವಿಡಿಯೋದಲ್ಲಿ, ಉಗ್ರರು ತಮ್ಮನ್ನು ಮಾನವೀಯತೆ ಉಳ್ಳವರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಭೀಕರ ಭಯೋತ್ಪಾದಕ ದಾಳಿ ನಡೆಸಿ ಶಿಶುಗಳು, ಮಕ್ಕಳು, ಪುರುಷರು, ಮಹಿಳೆಯರು ಮತ್ತು ವೃದ್ಧರ ಕೊಲೆ ಮತ್ತು ಅಪಹರಣ ಮಾಡಿದ್ದಾರೆ. ಶೆಮ್ ಮಿಯಾ ಸೇರಿದಂತೆ ಎಲ್ಲಾ ಒತ್ತೆಯಾಳುಗಳನ್ನು ರಕ್ಷಣೆ ಮಾಡಲು ಗುಪ್ತಚರ ಮತ್ತು ಸೇನಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಐಡಿಎಫ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿದೆ.
ಹಮಾಸ್‌ನ ಅರೇಬಿಕ್ ಟೆಲಿಗ್ರಾಮ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಶೀರ್ಷಿಕೆ ಮತ್ತು ಅಡಿಬರದ ಸಮೇತ ಪ್ರಸಾರ ಮಾಡಲಾಗಿದೆ. ಉಗ್ರಗಾಮಿ ಗುಂಪು ತನ್ನಲ್ಲಿ 200 ಒತ್ತೆಯಾಳುಗಳಿದ್ದಾರೆ. ಇನ್ನೂ 50 ಮಂದಿಯನ್ನು ಇತರ ಬಣಗಳ ವಶದಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಅಕ್ಟೋಬರ್ 7 ರಂದು ನಡೆದ ಸಂಗೀತ ಕಾರ್ಯಕ್ರಮದ ಮೇಲಿನ ದಾಳಿಯಲ್ಲಿ ಹಮಾಸ್ ಉಗ್ರರು ಕನಿಷ್ಠ 260 ಜನರನ್ನು ಹತ್ಯೆ ಮಾಡಿದ ನೂರಾರು ಜನರನ್ನು ಎಳೆದೊಯ್ದಿದ್ದರು.
ಇದನ್ನೂ ಓದಿ:ಮುಂದುವರಿದ ಇಸ್ರೇಲ್ ದಾಳಿ: ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ತೀವ್ರ.. ಇಸ್ರೇಲ್ನತ್ತ ಬೈಡನ್