ಕರ್ನಾಟಕ

karnataka

ETV Bharat / international

ಇಸ್ರೇಲ್‌ ವೃದ್ಧೆಯನ್ನು ಬರ್ಬರವಾಗಿ ಕೊಂದು ಫೇಸ್​ಬುಕ್​ಗೆ ವಿಡಿಯೋ ಅಪ್ಲೋಡ್; ಹಮಾಸ್​ ಉಗ್ರರ ಪೈಶಾಚಿಕ ಕೃತ್ಯ

ಅಸಹಾಯಕ ವೃದ್ಧೆಯೊಬ್ಬಳನ್ನು ಕೊಂದು ಅದರ ವಿಡಿಯೋವನ್ನು ಫೇಸ್​ಬುಕ್‌ಗೆ ಅಪ್ಲೋಡ್​ ಮಾಡಿದ ಹಮಾಸ್ ಉಗ್ರರು ತಮ್ಮ ದುಷ್ಟತನವನ್ನು ಜಗತ್ತಿಗೆ ತೋರಿಸಿದ್ದಾರೆ.

Hamas militants kill elderly woman upload video to Facebook
Hamas militants kill elderly woman upload video to Facebook

By ETV Bharat Karnataka Team

Published : Oct 10, 2023, 3:39 PM IST

ಟೆಲ್ ಅವಿವ್ (ಇಸ್ರೇಲ್) : ಇಸ್ರೇಲ್​​ ನಾಗರಿಕ ವೃದ್ಧೆಯೊಬ್ಬಳನ್ನು ಹಮಾಸ್​ ಉಗ್ರರು ಬರ್ಬರವಾಗಿ ಕೊಲೆ ಮಾಡಿ, ಭೀಭತ್ಸ ದೃಶ್ಯಾವಳಿಗಳನ್ನು ಇಂಟರ್​ನೆಟ್​ನಲ್ಲಿ ವೈರಲ್ ಮಾಡಿದ್ದಾರೆ. ವೃದ್ಧೆಯನ್ನು ಕೊಂದು ಆಕೆಯ ಮೊಬೈಲ್ ಫೋನ್​ನಿಂದಲೇ ಆ ವಿಡಿಯೋಗಳನ್ನು ಫೇಸ್​ಬುಕ್​ಗೆ ಅಪ್ಲೋಡ್​ ಮಾಡಿದ ಹಮಾಸ್ ಉಗ್ರರು ತಮ್ಮ ಕ್ರೂರತನವನ್ನು ಜಗತ್ತಿಗೆ ಪ್ರದರ್ಶಿಸಿದ್ದಾರೆ.

ಫೇಸ್​ಬುಕ್​ನಲ್ಲಿ ತನ್ನ ಸ್ವಂತ ಅಜ್ಜಿಯನ್ನು ಕೊಲೆ ಮಾಡಿದ ದೃಶ್ಯ ನೋಡಿದ ವೃದ್ಧೆಯ ಮೊಮ್ಮಗಳಾದ ಮೋರ್ ಬೈಡರ್​ ಈ ಬಗ್ಗೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. "ಈ ಘಟನೆ ನಮ್ಮ ಜೀವನದ ಅತ್ಯಂತ ಕೆಟ್ಟ ಘಳಿಗೆಗಳಲ್ಲೊಂದಾಗಿದೆ. ನನ್ನ ಅಜ್ಜಿ ನನ್ನ ಜಗತ್ತೇ ಆಗಿದ್ದರು. ನನ್ನ ಹಾಗೂ ನಮ್ಮ ಕುಟುಂಬದ ಜೀವನದ ಬೆಳಕು, ನಮ್ಮ ಜೀವನದ ಆಧಾರಸ್ತಂಭ ಅವರಾಗಿದ್ದರು" ಎಂದು ಬೈಡರ್​ ಶ್ರದ್ಧಾಂಜಲಿ ಸಂದೇಶದಲ್ಲಿ ಬರೆದಿದ್ದಾರೆ.

"ಜೀವನದುದ್ದಕ್ಕೂ ಕಿಬ್ಬುಟ್ಜ್ ನಿರ್ ಓಜ್ ನಿವಾಸಿಯಾಗಿದ್ದ ನನ್ನ ಅಜ್ಜಿಯನ್ನು ನಿನ್ನೆ ಅವರ ಮನೆಗೆ ನುಗ್ಗಿ ಹಮಾಸ್ ಭಯೋತ್ಪಾದಕರು ಕೊಲೆ ಮಾಡಿದ್ದಾರೆ. ದಕ್ಷಿಣ ಇಸ್ರೇಲ್​ನ ಕಿಬ್ಬುಟ್ಜ್ ನಿರ್ ಓಜ್ ಮನೆಗೆ ಬಂದ ಭಯೋತ್ಪಾದಕನೊಬ್ಬ ಆಕೆಯನ್ನು ಕೊಂದಿದ್ದಾನೆ. ಆತ ಆಕೆಯ ಫೋನ್ ತೆಗೆದುಕೊಂಡು ಕೊಲೆಯಯನ್ನು ಚಿತ್ರೀಕರಿಸಿ ಅದನ್ನು ಆಕೆಯ ಫೇಸ್​ಬುಕ್​​ನಲ್ಲಿ ಶೇರ್​ ಮಾಡಿದ್ದಾನೆ" ಎಂದು ಬೈಡರ್ ಹೇಳಿದ್ದಾರೆ.

ಗಾಜಾ ಪಟ್ಟಿ ಪ್ರದೇಶದ ನಾಗರಿಕ ಪ್ರದೇಶದ ಮೇಲೆ ಯಾವುದೇ ಮುನ್ಸೂಚನೆ ನೀಡದೆ ಇಸ್ರೇಲ್ ದಾಳಿ ಮಾಡಿದಾಗಲೆಲ್ಲ ಓರ್ವ ಇಸ್ರೇಲ್ ಒತ್ತೆಯಾಳನ್ನು ಕೊಲ್ಲುವುದಾಗಿ ಪ್ಯಾಲೆಸ್ಟೈನ್​ನ ಹಮಾಸ್​ ಉಗ್ರರು ಎಚ್ಚರಿಕೆ ನೀಡಿದ್ದಾರೆ. ಸೋಮವಾರ ರಾತ್ರಿ ಬಿಡುಗಡೆ ಮಾಡಿದ ಆಡಿಯೊದಲ್ಲಿ, ಕಸ್ಸಾಮ್ ಬ್ರಿಗೇಡ್​ನ ವಕ್ತಾರ ಅಬು ಒಬೇದಾ, "ನಾವು ಇದನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ ಮತ್ತು ಈಗಿರುವಂತೆ ಪೂರ್ವ ಎಚ್ಚರಿಕೆಯಿಲ್ಲದೆ ನಮ್ಮ ಜನರನ್ನು ಗುರಿಯಾಗಿಸಿ ಬಾಂಬ್ ದಾಳಿ ಮಾಡಿದರೆ ನಾವು ಹಿಡಿದಿಟ್ಟುಕೊಂಡಿರುವ ಇಸ್ರೇಲ್ ನಾಗರಿಕರನ್ನು ಒಬ್ಬೊಬ್ಬರನ್ನಾಗಿ ಕೊಲ್ಲುತ್ತೇವೆ" ಎಂದು ಹೇಳಿದ್ದಾನೆ.

ಮತ್ತೊಂದೆಡೆ, ಇಸ್ರೇಲ್​ನಿಂದ ಅಪಹರಿಸಲ್ಪಟ್ಟು ಗಾಜಾದಲ್ಲಿ ಬಂಧಿಸಿ ಇಡಲಾಗಿರುವ ಯಾವುದೇ ಒತ್ತೆಯಾಳುಗಳಿಗೆ ಹಾನಿ ಮಾಡದಂತೆ ಇಸ್ರೇಲ್​ನ ವಿದೇಶಾಂಗ ಸಚಿವರು ಹಮಾಸ್​ಗೆ ಎಚ್ಚರಿಕೆ ನೀಡಿದ್ದಾರೆ. ಗಾಜಾ ಗಡಿಯ ಮೇಲೆ ಮತ್ತೆ ಸಂಪೂರ್ಣ ನಿಯಂತ್ರಣ ಸಾಧಿಸಿರುವುದಾಗಿ ಹೇಳಿರುವ ಇಸ್ರೇಲ್ ಮಿಲಿಟರಿ ವಕ್ತಾರರು, ಹಮಾಸ್​ ಉಗ್ರರು ಗಡಿ ಬೇಲಿ ನಾಶಪಡಿಸಿದ ಸ್ಥಳಗಳಲ್ಲಿ ನೆಲಬಾಂಬ್​ಗಳನ್ನು ಅಡಗಿಸಿ ಇಡುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಅರಬ್‌ನಾಡಿನಲ್ಲಿ ಮೊದಲ ಹಿಂದು ದೇಗುಲ ನಿರ್ಮಾಣ: ಮುಂದಿನ ವರ್ಷ ಪ್ರಧಾನಿ ಮೋದಿಯಿಂದ ಉದ್ಘಾಟನೆ

ABOUT THE AUTHOR

...view details