ಟೆಲ್ ಅವೀವ್ : ಹಮಾಸ್ ಮತ್ತು ಇಸ್ರೇಲ್ ನಡುವೆ ಕಳೆದ 3 ತಿಂಗಳಿಂದ ಯುದ್ಧ ನಡೆಯುತ್ತಿದೆ. ಇಸ್ರೇಲಿ ಸೇನೆಯು ಗಾಜಾ ಪಟ್ಟಿಯಲ್ಲಿ ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ಬೆನ್ನಲ್ಲೇ ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿ ಮಂಗಳವಾರ ಇಸ್ರೇಲಿ ಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್ ಉಪ ನಾಯಕ ಸಲೇಹ್ ಅಲ್ ಅರೂರಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಕುರಿತು ಹಮಾಸ್ ಸಂಘಟನೆ ಕೂಡ ದೃಢಪಡಿಸಿದೆ.
57 ವರ್ಷ ವಯಸ್ಸಿನ ಲೆಬನಾನ್ ನಿವಾಸಿ ಸಲೇಹ್ ಅಲ್ ಅರೂರಿ ಅವರು ಹಮಾಸ್‌ನ ಪಾಲಿಟ್‌ಬ್ಯೂರೋದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥರಾಗಿ ಪರಿಗಣಿಸಲ್ಪಟ್ಟಿದ್ದರು. ಮತ್ತು ಖಾಸಿಮ್ ಬ್ರಿಗೇಡ್ಸ್‌ನ ಸಂಸ್ಥಾಪಕರಲ್ಲಿ ಒಬ್ಬರು. ಈ ಬ್ರಿಗೇಡ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿತು. ಕಳೆದ ವರ್ಷ ಅಮೆರಿಕ ಅರೂರಿಗೆ ಐದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.
ಅಲ್ ಅರೂರಿ ಬೈರುತ್‌ಗೆ ಸ್ಥಳಾಂತರಗೊಳ್ಳುವ ಮೊದಲು ಸಿರಿಯಾದಲ್ಲಿ ವಾಸಿಸುತ್ತಿದ್ದರು. ಅಲ್ಲಿಂದ ಅವರು ವೆಸ್ಟ್ ಬ್ಯಾಂಕ್‌ನಲ್ಲಿ ಹಮಾಸ್ ಮಿಲಿಟರಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು, ಭಯೋತ್ಪಾದಕ ಕೃತ್ಯಗಳನ್ನು ಪ್ರೋತ್ಸಾಹಿಸಿದರು ಮತ್ತು ದಾಳಿಗಳಿಗೆ ಹಣಕಾಸು ಒದಗಿಸಲು ನೆರವು ನೀಡುತ್ತಿದ್ದರು. ಜೊತೆಗೆ, ಇರಾನ್ ಮತ್ತು ಲೆಬನಾನ್‌ನಲ್ಲಿರುವ ಭಯೋತ್ಪಾದಕ ಸಂಘಟನೆ ಹೆಜ್ಬೊಲ್ಲಾ ಜೊತೆ ನಿಕಟ ಸಂಬಂಧ ಹೊಂದಿದ್ದ ಹಮಾಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು.