ನವದೆಹಲಿ : ಈಜಿಪ್ಟ್ ಇತ್ತೀಚೆಗೆ ಪ್ರಸ್ತಾಪಿಸಿದ ಹೊಸ ಕದನ ವಿರಾಮ ಯೋಜನೆಯ ಬಗ್ಗೆ ತನ್ನ ಅಭಿಪ್ರಾಯ ಮಂಡಿಸಲು ಹಮಾಸ್ ನಿಯೋಗವೊಂದು ಇಂದು (ಶುಕ್ರವಾರ) ಈಜಿಪ್ಟ್ಗೆ ಭೇಟಿ ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪುನಃ ಮುಂದುವರಿಸಬಹುದಾದ ಕದನ ವಿರಾಮ, ಇಸ್ರೇಲ್ನಲ್ಲಿನ ಪ್ಯಾಲೆಸ್ಟೈನ್ ಕೈದಿಗಳಿಗೆ ಬದಲಾಗಿ ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಅಂತಿಮವಾಗಿ ಸಂಘರ್ಷವನ್ನು ಕೊನೆಗೊಳಿಸುವುದು ಹೀಗೆ ಮೂರು ಹಂತದ ಕದನ ವಿರಾಮದ ಯೋಜನೆಯನ್ನು ಈಜಿಪ್ಟ್ ಮುಂದಿಟ್ಟಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
"ಯುದ್ಧ ಮುಗಿದ ನಂತರ ಗಾಜಾವನ್ನು ಆಳುವ ಮತ್ತು ಪುನರ್ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುವ ಎಲ್ಲಾ ಪ್ಯಾಲೆಸ್ಟೈನ್ ಬಣಗಳನ್ನು ಒಳಗೊಂಡ ಸರ್ಕಾರ ರಚನೆಯ ಯೋಜನೆಯನ್ನು ಸಹ ಇದು ಒಳಗೊಂಡಿದೆ" ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಒತ್ತೆಯಾಳುಗಳ ವಿನಿಮಯದ ವಿವರಗಳು ಮತ್ತು ಇಸ್ರೇಲ್ ತನ್ನ ಮಿಲಿಟರಿಯನ್ನು ಹಿಂತೆಗೆದುಕೊಳ್ಳುವ ಭರವಸೆಗಳು ಸೇರಿದಂತೆ ಪ್ಯಾಲೆಸ್ಟೈನ್ ಬಣಗಳ ಪ್ರತಿಕ್ರಿಯೆಯನ್ನು ನಿಯೋಗವು ಸಭೆಯಲ್ಲಿ ಪ್ರಸ್ತಾಪಿಸಲಿದೆ.
"ಪ್ಯಾಲೆಸ್ಟೈನ್ನಲ್ಲಿ ರಕ್ತಪಾತ ನಿಲ್ಲಿಸುವ ಉದ್ದೇಶದಿಂದ ಸಂಬಂಧಪಟ್ಟ ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಒಟ್ಟುಗೂಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ" ಎಂದು ಈಜಿಪ್ಟ್ ಸರ್ಕಾರದ ಮಾಹಿತಿ ಸೇವೆಗಳ ಮುಖ್ಯಸ್ಥೆ ದಿಯಾ ರಶ್ವಾನ್ ಹೇಳಿದರು.