ಹೈದರಾಬಾದ್: ಇಸ್ರೇಲ್ ಹಾಗೂ ಗಾಜಾ ಸಂಘರ್ಷದ ನಡುವೆ ಹಮಾಸ್ ಕಮಾಂಡರ್ ಮಹಮೂದ್ ಅಲ್ ಜಹರ್ ಹೇಳಿಕೆಯ ವಿಡಿಯೋವೊಂದು ಹೊರಬಿದ್ದಿದೆ. ಇಂಟರ್ನೆಟ್ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ವಿಡಿಯೋದಲ್ಲಿ ''ಇಸ್ರೇಲ್ ಕೇವಲ ಆರಂಭಿಕ ಟಾರ್ಗೆಟ್, ಇಡೀ ಗ್ರಹವು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ'' ಎಂದು ಮಹಮೂದ್ ಹೇಳಿದ್ದಾರೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ನ ಹಮಾಸ್ ಉಗ್ರಗಾಮಿ ಸಂಘಟನೆಯು ಏಕಾಏಕಿ ದಾಳಿ ನಡೆಸಿದೆ. ಇದರಿಂದ ಇಸ್ರೇಲ್ ಕೂಡ ಪ್ರತಿದಾಳಿ ಆರಂಭಿಸಿದೆ. ಕಳೆದ ಆರು ದಿನಗಳಿಂದ ಇಸ್ರೇಲ್ ಸೇನೆ ಹಾಗೂ ಹಮಾಸ್ ಸಂಘಟನೆ ಮಧ್ಯೆ ಭೀಕರ ಯುದ್ಧ ನಡೆಯುತ್ತಿದೆ. ಎರಡೂ ಕಡೆಗಳಲ್ಲಿ ನೂರಾರು ಜನರು ಬಲಿಯಾಗಿದ್ದಾರೆ. ಇದರ ಮಧ್ಯೆ ಹಮಾಸ್ ಕಮಾಂಡರ್ ಮಹಮೂದ್ ಅಲ್ ಜಹರ್ ಎಚ್ಚರಿಕೆಯ ಸಂದೇಶ ಕೊಡುವ ವಿಡಿಯೋ ಬಹಿರಂಗವಾಗಿದೆ.
''ಇಸ್ರೇಲ್ ಮೊದಲ ಗುರಿ ಮಾತ್ರ. ಇಡೀ ಗ್ರಹವು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ'' ಎಂದು ಹೇಳಿರುವ ಜಹರ್, ''ಭೂಮಿ ಗ್ರಹದ ಸಂಪೂರ್ಣ 510 ಮಿಲಿಯನ್ ಚದರ ಕಿಲೋಮೀಟರ್‌ಗಳು ಯಾವುದೇ ಅನ್ಯಾಯ, ದಬ್ಬಾಳಿಕೆ ಹಾಗೂ ಪ್ಯಾಲೆಸ್ಟೀನಿಯರು, ಎಲ್ಲ ಅರಬ್ಬರು ಮತ್ತು ಲೆಬನಾನ್, ಸಿರಿಯಾ, ಇರಾಕ್ ಮತ್ತು ಇತರ ದೇಶಗಳಲ್ಲಿ ನಡೆದಂತಹ ಹತ್ಯೆಗಳು ಮತ್ತು ಅಪರಾಧಗಳಿಲ್ಲದ ವ್ಯವಸ್ಥೆಯ ಅಡಿ ಬರಲಿದೆ'' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಹಮಾಸ್ ದಾಳಿಯಲ್ಲಿ 22 ಅಮೆರಿಕನ್ನರು ಬಲಿ: 17 ಮಂದಿ ನಾಪತ್ತೆ
ವಿಡಿಯೋ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಹಮಾಸ್ ಸಂಘಟನೆಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಹಮಾಸ್ ವಿರುದ್ಧ ಹೋರಾಡುವ ತಮ್ಮ ಅಚಲ ಬದ್ಧತೆ ಪುನರುಚ್ಚರಿಸುವ ಹೇಳಿಕೆಯನ್ನು ಅವರು ನೀಡಿದ್ದಾರೆ. ಹಮಾಸ್ ಸಂಘಟನೆಯನ್ನು ದಾಯೆಶ್ (ಇಸ್ಲಾಮಿಕ್ ಸ್ಟೇಟ್ ಗುಂಪು)ಗೆ ಹೋಲಿಕೆ ಮಾಡಿರುವ ನೆತನ್ಯಾಹು, ಜಗತ್ತು ಐಸಿಸ್ ವಿರುದ್ಧ ಹೋರಾಡುತ್ತಿರುವಂತೆ ಇಸ್ರೇಲ್, ಹಮಾಸ್ ಅನ್ನು ನಿರ್ಮೂಲನೆ ಮಾಡಲಿದೆ ಶಪಥ ಮಾಡಿದ್ದಾರೆ.
ಮತ್ತೊಂದೆಡೆ, ಹಮಾಸ್ ಉಗ್ರಗಾಮಿಗಳು ಇಸ್ರೇಲ್ನ ಸೈನಿಕರು ಮತ್ತು ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಇಸ್ರೇಲ್ ದಾಳಿ ಮಾಡಿದ ಗಾಜಾದ ಪ್ರತಿ ಮನೆಯಲ್ಲಿ ಅವರನ್ನು ನೇಣಿಗೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಯಾವುದೇ ಇಸ್ರೇಲಿಗರು ಒತ್ತೆಯಾಳಾಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, ಹಮಾಸ್ ಉಗ್ರಗಾಮಿಗಳ ಇಂತಹ ಬೆದರಿಕೆಯಿಂದ ಇಸ್ರೇಲ್ ತನ್ನ ಕಾರ್ಯಾಚರಣೆ ತೀವ್ರಗೊಳಿಸುತ್ತಿದೆ.
ಈ ನಿಟ್ಟಿನಲ್ಲಿ ಪ್ರಧಾನಿ ನೆತನ್ಯಾಹು ಮಾಜಿ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಅವರೊಂದಿಗೆ ಯುದ್ಧ ಪರಿಸ್ಥಿತಿ ಸಮಾಲೋಚನೆ ನಡೆಸಿದ್ದಾರೆ. ಗಾಜಾದ ಮೇಲೆ ಇಸ್ರೇಲ್ ಸೇನೆ ನಿರಂತರ ಬಾಂಬ್ ದಾಳಿ ಮುಂದುವರೆಸಿದೆ. ಇಸ್ರೇಲ್ ಹಾಗೂ ಗಾಜಾ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುತ್ತಲೇ ಇರುವುದರಿಂದ ಜಗತ್ತು ಉಸಿರು ಬಿಗಿ ಹಿಡಿದು ನೋಡುವಂತಾಗಿದೆ.
ಇದನ್ನೂ ಓದಿ:ಪ್ರತಿಯೊಬ್ಬ ಹಮಾಸ್ ಸದಸ್ಯರು ಇನ್ಮುಂದೆ ಸತ್ತಂತೆ.. ಹಮಾಸ್ ಸರ್ವನಾಶ ಮಾಡಲು ಶಪಥ ತೊಟ್ಟ ಇಸ್ರೇಲ್ ಪ್ರಧಾನಿ