ಹೈದರಾಬಾದ್: ಇಸ್ರೇಲ್ ಜೊತೆಗಿನ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಬಹುದು ಎಂದು ಪ್ಯಾಲೆಸ್ಟೈನ್‌ನ ಹಮಾಸ್ ನಂಬಿದೆ ಎಂದು ಹಮಾಸ್ನ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಅಲಿ ಬರಾಕಾ ಹೇಳಿದ್ದಾರೆ. "ಹಮಾಸ್ ಗುಂಪು ರಷ್ಯಾ ಮತ್ತು ಅದರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ಉನ್ನತ ಮಟ್ಟದ ನಂಬಿಕೆಯನ್ನು ಹೊಂದಿದೆ. ಹೀಗಾಗಿ ಸಂಘರ್ಷವನ್ನು ಪರಿಹರಿಸುವಲ್ಲಿ ರಷ್ಯಾದ ಮಧ್ಯಸ್ಥಿಕೆಯನ್ನು ನಾವು ಸ್ವಾಗತಿಸುತ್ತೇವೆ" ಎಂದು ಬರಾಕಾ ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್ಗೆ (TASS) ತಿಳಿಸಿದರು.
"ಇಸ್ರೇಲ್ನ ಬಾಂಬ್ ದಾಳಿ ಮತ್ತು ಗಾಜಾ ಪಟ್ಟಿಯ ಮೇಲಿನ ದಿಗ್ಬಂಧನದಿಂದ ಉಂಟಾಗಿರುವ ನಾಗರಿಕರ ಸಂಕಷ್ಟವನ್ನು ಆದಷ್ಟು ಬೇಗ ಕೊನೆಗೊಳಿಸಲು ನಾವು ಆಸಕ್ತಿ ಹೊಂದಿದ್ದೇವೆ. ಹಮಾಸ್ ನಾಯಕತ್ವವು ಮಾಸ್ಕೋದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅರಬ್ ದೇಶಗಳಲ್ಲಿ ರಷ್ಯಾದ ರಾಜತಾಂತ್ರಿಕರೊಂದಿಗೆ ಸಂಭಾವ್ಯ ಸಭೆಗಳಿಗೆ ನಾವು ಸಿದ್ಧರಿದ್ದೇವೆ ಮತ್ತು ಅವರ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ಅವರು ಹೇಳಿದರು.
ಹಮಾಸ್ ಉಗ್ರಗಾಮಿ ಗುಂಪು ಪುಟಿನ್ ಅವರ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಬಗ್ಗೆ ಮಾತನಾಡಿದ ಬರಾಕಾ, ಪ್ರಾದೇಶಿಕ ಬೆಳವಣಿಗೆಗಳನ್ನು ಮೌಲ್ಯಮಾಪನ ಮಾಡುವ ರಷ್ಯಾದ ನಾಯಕರ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಪ್ಯಾಲೆಸ್ಟೈನಿಯನ್ನರ ರಕ್ಷಣೆಗಾಗಿ ರಷ್ಯಾ ಧ್ವನಿ ಎತ್ತಿರುವುದು ಮತ್ತು ಆಕ್ರಮಣ ನಿಲ್ಲಿಸುವಂತೆ, ಗಾಜಾ ಪಟ್ಟಿಯ ಮೇಲಿನ ದಿಗ್ಬಂಧನ ತೆಗೆದುಹಾಕುವಂತೆ ಮತ್ತು ಮಾನವೀಯ ನೆರವನ್ನು ಪುನರಾರಂಭಿಸಲು ಒತ್ತಾಯಿಸಿರುವ ಮಾಸ್ಕೋದ ಬೇಡಿಕೆಗಳು ನಮ್ಮ ಪಾಲಿಗೆ ನಿರ್ಣಾಯಕವಾಗಿವೆ ಎಂದು ಬರಾಕಾ ಒತ್ತಿ ಹೇಳಿದರು.