ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಸಮೀಪದ ಇಟಾವೊನ್ ಎಂಬ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಹ್ಯಾಲೋವೀನ್ ಹಬ್ಬಾಚರಣೆಯ ವೇಳೆ ಭಾರಿ ಕಾಲ್ತುಳಿತ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 151 ಕ್ಕೇರಿದೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಇಟಾವೊನ್ನ ಕಿರಿದಾದ ಗಲ್ಲಿಯಲ್ಲಿ ಹೆಚ್ಚು ಜನಸಂದಣಿ ಸೇರಿದ್ದರಿಂದ ದುರ್ಘಟನೆ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಹಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬೀದಿಯಲ್ಲಿ ಬಿದ್ದಿದ್ದವರನ್ನು ಅಗ್ನಿಶಾಮಕ ದಳದವರು ಆಸ್ಪತ್ರೆಗೆ ಸಾಗಿಸಿದರು. ಸಾವನ್ನಪ್ಪಿರುವವರಲ್ಲಿ 19 ಮಂದಿ ಹಾಗೂ ಗಾಯಗೊಂಡವರಲ್ಲಿ 15 ಮಂದಿ ವಿದೇಶಿಗರಾಗಿದ್ದು, ಇರಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ನಾರ್ವೆ ದೇಶದವರು ಎಂದು ತಿಳಿದು ಬಂದಿದೆ.