ಟೆಹ್ರಾನ್ (ಇರಾನ್): ತಲೆಗೆ ಸ್ಕಾರ್ಫ್ ಕಟ್ಟದೆ ಹಿಂದೆ ಕಟ್ಟಿದ ತಲೆಗೂದಲು ಇಳಿಬಿಟ್ಟು ಅತ್ಯಂತ ಧೈರ್ಯದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇರಾನಿನ ಯುವತಿ ಹದಿಸ್ ನಜಾಫಿಯ ವಿಡಿಯೋ ವೈರಲ್ ಆಗಿತ್ತು. ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇವರು ಭಾಗವಹಿಸಿದ್ದರು. ಆದರೆ ಸದ್ಯ ಯುವತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಸ್ಮಶಾನದಲ್ಲಿ ತೋಡಿದ ಗುಂಡಿಯ ಎದುರು ಯುವತಿಯ ಪೋಟೋ ಇಟ್ಟು ಅದರ ಮುಂದೆ ಹಲವಾರು ಜನ ರೋದಿಸುತ್ತಿರುವ ಚಿತ್ರ ಈಗ ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿದೆ. ಯುವತಿಯ ಹೊಟ್ಟೆ, ಕುತ್ತಿಗೆ, ಎದೆ ಮತ್ತು ಕೈಗಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎನ್ನಲಾಗ್ತಿದೆ.
ಕಳೆದ ಒಂದು ವಾರದಿಂದ ಇರಾನ್‌ನಲ್ಲಿ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಸರಿಯಾಗಿ ಹಿಜಾಬ್ ಧರಿಸದ ಕಾರಣದಿಂದ ಬಂಧಿಸಲ್ಪಟ್ಟಿದ್ದ 22 ವರ್ಷದ ಯುವತಿ ಮಹ್ಸಾ ಅಮೀನಿ ಪೊಲೀಸ್ ಕಸ್ಟಡಿಯಲ್ಲಿರುವಾಗ ಮೃತಪಟ್ಟ ನಂತರ ದೇಶಾದ್ಯಂತ ಸರ್ಕಾರ ವಿರೋಧಿ ಗಲಭೆಗಳು ಭುಗಿಲೆದ್ದಿವೆ. ಈ ವಾರಾಂತ್ಯದಲ್ಲಿ ನೂರಾರು ಜನರು ಮಹ್ಸಾ ಅಮೀನಿಯ ಸಾವಿನ ವಿರುದ್ಧ ಲಂಡನ್‌ನಲ್ಲಿ ಕೂಡ ಪ್ರತಿಭಟನೆ ನಡೆಸಿದ್ದಾರೆ. ಅಮೀನಿ ಸೆಪ್ಟೆಂಬರ್ 16 ರಂದು ನಿಧನರಾಗಿದ್ದರು.