ಮೆಕ್ಸಿಕೋ:ಇಲ್ಲಿನ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ ರೇಸ್ನಲ್ಲಿ ಭೀಕರ ಶೂಟೌಟ್ ಘಟನೆ ವರದಿಯಾಗಿದೆ. ಆಗಂತುಕರ ಗುಂಡಿನ ದಾಳಿಗೆ 10 ಮಂದಿ ಕಾರ್ ರೇಸರ್ಗಳು ಪ್ರಾಣ ಕಳೆದುಕೊಂಡಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೇ 20 ರಂದು ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಕಾರ್ ರೇಸಿಂಗ್ ನಡೆಯುತ್ತಿತ್ತು. ಈ ವೇಳೆ ವ್ಯಾನ್ವೊಂದರಲ್ಲಿ ಬಂದ ಬಂದೂಕುಧಾರಿಗಳು ಕಾರ್ ರೇಸ್ನಲ್ಲಿ ಭಾಗವಹಿಸಿದವರ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಇದರಿಂದ ಕನಿಷ್ಠ 10 ಮಂದಿ ರೇಸರ್ಗಳು ಪ್ರಾಣ ಕಳೆದುಕೊಂಡಿದ್ದಾರೆ. 9 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಬಾಜಾ ಕ್ಯಾಲಿಫೋರ್ನಿಯಾ ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.
ಥ್ರಿಲ್ಲಿಂಗ್ ನೀಡಬೇಕಿದ್ದ ಕಾರ್ ರೇಸಿಂಗ್ನಲ್ಲಿ ಗುಂಡಿನ ಮೊರೆತದಿಂದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಯಾವ ಕಾರಣಕ್ಕಾಗಿ ಶೂಟೌಟ್ ನಡೆಸಲಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಸುದ್ದಿ ತಿಳಿದ ರಾಜ್ಯ ಪೊಲೀಸ್, ಮೆರೀನ್, ಅಗ್ನಿಶಾಮಕ ಇಲಾಖೆ ಮತ್ತು ಮೆಕ್ಸಿಕನ್ ರೆಡ್ ಕ್ರಾಸ್ ಮತ್ತು ಇತರ ಏಜೆನ್ಸಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಬಿಗಿ ಬಂದೋಬಸ್ತ್ ನೀಡಿದ್ದಾರೆ.
ರಾಜ್ಯ ಅಟಾರ್ನಿ ಜನರಲ್ ರಿಕಾರ್ಡೊ ಇವಾನ್ ಕಾರ್ಪಿಯೊ ಸ್ಯಾಂಚೆಝ್ ಪ್ರಕಾರ, ಆಗಂತುಕರು ಕಾರ್ ರೇಸ್ ಅಂಕಣ ಪ್ರವೇಶಿಸಿ ದಾಳಿ ನಡೆಸಿದ್ದಾರೆ. ಇದರ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಗುಂಡಿನ ದಾಳಿಯಲ್ಲಿ ಕಾರ್ ರೇಸರ್ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಘಟನೆಯಲ್ಲಿ ಸಾವನ್ನಪ್ಪಿದವರ ಗುರುತು ಮತ್ತು ರಾಷ್ಟ್ರೀಯತೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಗಾಯಗೊಂಡ ರೇಸರ್ಗಳನ್ನು ಉತ್ತರ ಬಾಜಾ ಕ್ಯಾಲಿಫೋರ್ನಿಯಾದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.