ಟೆಕ್ಸಾಸ್(ಅಮೆರಿಕ):ಅಮೆರಿಕದಲ್ಲಿ ಬಂದೂಕು ಹೊಂದಿರುವುದರ ಮೇಲೆ ನಿರ್ಬಂಧ ಹೇರುವ ವಿಚಾರ ಮುನ್ನೆಲೆಗೆ ಬಂದ ನಡುವೆಯೂ, ಅದರ ಮೊರೆತ ಮಾತ್ರ ನಿಂತಿಲ್ಲ. ಮಗು ನಿದ್ದೆ ಮಾಡುತ್ತಿದೆ ಗುಂಡು ಹಾರಿಸಬೇಡ ಎಂದು ಹೇಳಿದ ನೆರೆಮನೆಯವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ ವಿಚಿತ್ರ ಘಟನೆ ನಡೆದಿದೆ. ಟೆಕ್ಸಾಸ್‌ನ ಕ್ಲೀವ್‌ಲ್ಯಾಂಡ್‌ನಲ್ಲಿ ದುರಂತ ನಡೆದಿದ್ದು, 8 ವರ್ಷದ ಮಗು ಸೇರಿದಂತೆ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬಂದೂಕುಧಾರಿಯೊಬ್ಬ ವಿನಾಕಾರಣ ಗುಂಡು ಹಾರಿಸುತ್ತಿದ್ದ. ನೆರೆಹೊರೆಯವರು ಹೀಗೆ ಮಾಡಬೇಡ. ಮಗು ಮನೆಯಲ್ಲಿ ಮಲಗಿದೆ. ಅದಕ್ಕೆ ನಿದ್ರಾಭಂಗವಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದರು. ಇಷ್ಟಕ್ಕೇ ಸಿಟ್ಟಾದ ಆ ವ್ಯಕ್ತಿ ಮನೆಯವರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಶನಿವಾರ ಸ್ಥಳೀಯ ಕಾಲಮಾನ ಸುಮಾರು 11:30 ಗಂಟೆಗೆ ಈ ಶೂಟೌಟ್ ನಡೆದಿದೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ 8 ವರ್ಷದ ಮಗು ಮತ್ತು ನಾಲ್ವರನ್ನು ಗುಂಡಿಕ್ಕಿರುವುದು ಕಂಡುಬಂದಿದೆ.
ಮದ್ಯಪಾನ ಮಾಡಿದ್ದ ವ್ಯಕ್ತಿ ತನ್ನ ಮುನೆಯ ಮುಂದೆ ಗುಂಡು ಹಾರಿಸುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ನೆರೆಮನೆಯವರು ಗುಂಡು ಹಾರಿಸದಂತೆ ಹೇಳಿದ್ದಾರೆ. ಮಗು ಮಲಗುತ್ತಿದೆ. ಸದ್ದು ಮಾಡದಂತೆ ಹೇಳಿದ್ದಾರೆ. ನನ್ನ ಮನೆಯ ಮುಂದೆ ಏನೂ ಬೇಕಾದರೂ ಮಾಡುವೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಸಿಟ್ಟಾದ ಆ ವ್ಯಕ್ತಿ ಕುಟುಂಬದ ಮೇಲೆ ಗುಂಡಿನ ಸುರಿಮಳೆ ಸುರಿಸಿದ್ದಾನೆ.
ಮನೆಯವರ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೆರಿಕದಲ್ಲಿ ಬಂದೂಕು ಹಿಂಸಾಚಾರ ಸಾಮಾನ್ಯವಾಗಿದೆ. ದೇಶದಲ್ಲಿ ಇದುವರೆಗೆ ಕನಿಷ್ಠ 174 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.