ಸೆಟಿಂಜೆ (ಮಾಂಟೆನೆಗ್ರೊ):ಪಶ್ಚಿಮ ಮಾಂಟೆನೆಗ್ರೊ ನಗರದಲ್ಲಿ ವ್ಯಕ್ತಿಯೊಬ್ಬ ಪ್ರಾಣಿಗಳ ಬೇಟೆಯಾಡುವ ಬಂದೂಕಿನಿಂದ ಇಬ್ಬರು ಮಕ್ಕಳು ಸೇರಿದಂತೆ 10 ಮಂದಿ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಆಘಾತಕಾರಿ (Montenegro shootout) ಘಟನೆ ನಡೆದಿದೆ. ದಾಳಿಯನ್ನು ತಡೆಯಲು ದಾರಿಹೋಕನೊಬ್ಬ ಹಂತಕನ ಮೇಲೆ ಫೈರಿಂಗ್ ಮಾಡಿ ಕೊಂದಿದ್ದಾನೆ. ಜೊತೆಗೆ ಶೂಟೌಟ್ನಲ್ಲಿ ಪೊಲೀಸ್ ಸೇರಿ ಮೂವರು ಗಾಯಗೊಂಡಿದ್ದಾರೆ.
ಮಾಂಟೆನೆಗ್ರೋದಲ್ಲಿ ಶೂಟೌಟ್:ದಾಳಿಕೋರ 34 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶೂಟೌಟ್ ಮಾಡಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಸೆಟಿಂಜೆಯ ಮೆಡೋವಿನಾ ಪ್ರದೇಶದಲ್ಲಿ ದಾಳಿಕೋರ ವಾಸವಾಗಿದ್ದ. ದಾಳಿಕೋರ ಮೊದಲು ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಕುಟುಂಬದ 8 ಮತ್ತು 11 ವರ್ಷದ ಮಕ್ಕಳು ಮತ್ತು ತಾಯಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಬಳಿಕ ಅದೇ ರೈಫಲ್ ತೆಗೆದುಕೊಂಡು ರಸ್ತೆಗೆ ಬಂದ ಹಂತಕ ದಾರಿಯಲ್ಲಿ ಹೋಗುತ್ತಿದ್ದ ಜನರ ಮೇಲೆ ಮನಸೋಇಚ್ಚೆ ಫೈರಿಂಗ್ ಮಾಡಿದ್ದಾನೆ. ಇದರಿಂದ ಸ್ಥಳದಲ್ಲೇ 7 ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ. ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.