ಅಥೆನ್ಸ್ (ಗ್ರೀಸ್) :ಎವಿಯಾ ದ್ವೀಪದಲ್ಲಿ ಮಂಗಳವಾರ ಕಾಳ್ಗಿಚ್ಚನ್ನು ನಿಯಂತ್ರಿಸಲು ಆಗಮಿಸಿದ್ದ ವಿಮಾನವೊಂದು ಪತನಗೊಂಡು ಗ್ರೀಕ್ ವಾಯುಪಡೆಯ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ತೆರಳಿ ಪತನಗೊಂಡಿದೆ.
ಮಂಗಳವಾರ ಪ್ಲಾಟಾನಿಸ್ಟೋಸ್‌ನಲ್ಲಿ ನಡೆದ ಅಗ್ನಿಶಾಮಕ ಕಾರ್ಯಾಚರಣೆಯ ಸಂದರ್ಭದಲ್ಲಿ ವಾಟರ್ ಬಾಂಬಿಂಗ್ ವಿಮಾನ ಕೆನಡೈರ್ ಸಿಎಲ್ -215 ಮಧ್ಯಾಹ್ನ 2:52 ಕ್ಕೆ (ಸ್ಥಳೀಯ ಕಾಲಮಾನ) ಪತನಗೊಂಡಿತು ಎಂದು ದೇಶದ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯ ಬಳಿಕ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, 34 ವರ್ಷದ ವಿಮಾನದ ಕ್ಯಾಪ್ಟನ್ ಮತ್ತು 27 ವರ್ಷದ ಸಹ ಪೈಲಟ್ ಇಬ್ಬರೂ ಸುಟ್ಟು ಕರಕಲಾಗಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ :ಜೌಕು ಕಣಿವೆ ಕಾಳ್ಗಿಚ್ಚು : ನೀರು ಮರುಪೂರಣಕ್ಕೆ ಬಂದ ಐಎಎಫ್ ಬಾಂಬಿ ಹೆಲಿಕಾಪ್ಟರ್, ವಿಡಿಯೋ
"ಎವಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಗ್ನಿಶಾಮಕ ವಿಮಾನ CL-215 ನ ವಾಯುಪಡೆಯ ಅಧಿಕಾರಿ ಮತ್ತು ಪೈಲಟ್ ಕರ್ತವ್ಯದ ವೇಳೆ ಮೃತಪಟ್ಟಿದ್ದು, ಈ ಹಿನ್ನೆಲೆ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರವಾಸಿ ದ್ವೀಪಗಳಾದ ರೋಡ್ಸ್ ಮತ್ತು ಕಾರ್ಫು ಸೇರಿದಂತೆ ಮೂರು ಕಡೆ ಭಾರಿ ಕಾಡ್ಗಿಚ್ಚು ಹಬ್ಬಿದೆ. ಈ ಪ್ರದೇಶದಲ್ಲಿ ಗಾಳಿ ಬಲವಾಗಿ ಬೀಸುತ್ತಿರುವುದರಿಂದ ಸುಲಭವಾಗಿ ಬೆಂಕಿ ವ್ಯಾಪಿಸುತ್ತಿದೆ. ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ. ಗ್ರೀಸ್ನಲ್ಲಿ 35,000 ಹೆಕ್ಟೇರ್ (86,500 ಎಕರೆ) ಅರಣ್ಯ ಮತ್ತು ಇತರೆ ಭೂಮಿ ಬೆಂಕಿಗಾಹುತಿಯಾಗಿದೆ. ಸೋಮವಾರ ಸುಮಾರು 2,500 ಜನರನ್ನು ಗ್ರೀಕ್ ದ್ವೀಪವಾದ ಕಾರ್ಫುದಿಂದ ಸ್ಥಳಾಂತರಿಸಲಾಗಿದೆ.