ವಿಶ್ವಸಂಸ್ಥೆ(ನ್ಯೂಯಾರ್ಕ್): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಈ ಕಾರ್ಯಕ್ರಮದ ಬಗ್ಗೆ ವಿಶ್ವದಾದ್ಯಂತ ರಾಜತಾಂತ್ರಿಕರು ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ತೀರಾ ಉತ್ಸಾಹದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಕ್ಯಾಂಪಸ್‌ನ ಉತ್ತರ ಲಾನ್‌ನಲ್ಲಿ ಸೋಮವಾರ ಸಂಭ್ರಮದ ವಾತಾವರಣ ಇತ್ತು. ಸುಮಾರು 1,800 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಕಾಂಬೋಜ್ ಮಾಹಿತಿ ನೀಡಿದ್ದಾರೆ. ಮೋದಿ ಅವರು ಯೋಗಾ ದಿನದಂದೇ ಅಮೆರಿಕ ಪ್ರವಾಸ ಆರಂಭಿಸಲಿದ್ದು,ನಂತರ ವಾಷಿಂಗ್ಟನ್ಗೆ ತೆರಳಲಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳುವ ಪ್ರಕಾರ, ನ್ಯೂಯಾರ್ಕ್‌ನಲ್ಲಿ ಮೋದಿ ಅವರು ವಿಶ್ವದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಅಮೆರಿಕಕ್ಕೆ ಮೋದಿ ಅವರ 8ನೇ ಭೇಟಿ ಇದಾಗಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಗಲಿದೆ. 21 ಗನ್ಗಳ ವಿಶಾಲ ತೋಪುಗಳ ಮೂಲಕ ಅಮೆರಿಕ ಮೋದಿ ಅವರಿಗೆ ಸ್ವಾಗತ ಕೋರಲಿದೆ. ಇನ್ನು ಪ್ರಧಾನಿ ಮೋದಿ ಎರಡನೇ ಬಾರಿಗೆ ಅಮೆರಿಕ ಸಂಸತ್ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
"ವಸುಧೈವ ಕುಟುಂಬಕಂ" ಅಥವಾ "ಒಂದು ವಿಶ್ವ - ಒಂದು ಕುಟುಂಬ - ಎಲ್ಲರ ಕಲ್ಯಾಣಕ್ಕಾಗಿ ಯೋಗ" ಎಂಬುದು ಈ ವರ್ಷದ ವಿಶ್ವಯೋಗ ದಿನಾಚರಣೆಯ ಘೋಷ ವಾಕ್ಯವಾಗಿದೆ. ಪ್ರಧಾನಿ ಮೋದಿ ಅವರೇ ವೈಯಕ್ತಿಕವಾಗಿ ವಿಶ್ವ ಯೋಗದಿನದ ಆಚರಣೆಯನ್ನು ಮುನ್ನಡೆಸುತ್ತಿರುವುದು ಕಾರ್ಯಕ್ರಮದ ಆಸಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ರುಚಿಕಾ ಕಾಂಬೋಜ್ ಹೇಳಿದರು.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷೆ ಮತ್ತು ಉಪ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಅವರು ಯೋಗ ಸಮಾರಂಭದಲ್ಲಿ ಮೋದಿ ಅವರೊಂದಿಗೆ ಭಾಗವಹಿಸಲಿದ್ದು, ಅವರೊಂದಿಗಿನ ಉಪಸ್ಥಿತಿಯನ್ನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.