ಕೊಲಂಬೋ:ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಜನರು ದಂಗೆ ಎದ್ದಿದ್ದು ಮಾಲ್ಡೀವ್ಸ್ಗೆ ಪರಾರಿಯಾಗಿ ಅಲ್ಲಿಂದ ಸಿಂಗಾಪುರಕ್ಕೆ ಹೋಗಿರುವ ಗೊಟಬಯಾ ರಾಜಪಕ್ಸ ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ದೇಶದಲ್ಲಿ ಜನರು ದಂಗೆ ಎದ್ದ ಬಳಿಕ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದ ರಾಜಪಕ್ಸ ಬಳಿಕ ಸಿಂಗಾಪುರಕ್ಕೆ ಪರಾರಿಯಾಗಿದ್ದಾರೆ. ಅಲ್ಲಿಂದ ಸಂಸತ್ ಸ್ಪೀಕರ್ಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ರಾಜಪಕ್ಸೆ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂದು ಸ್ಪೀಕರ್ ಕಚೇರಿ ತಿಳಿಸಿದೆ.
ದೇಶದ ಜನರ ದಂಗೆಗೆ ಬೆದರಿ ಸಿಂಗಾಪುರಕ್ಕೆ ಓಡಿ ಹೋಗಿರುವ ರಾಜಪಕ್ಸರನ್ನು ಬೆಂಬಲಿಸಿರುವ ಸಿಂಗಾಪುರ ವಿದೇಶಾಂಗ ಸಚಿವಾಲಯ ಅವರನ್ನು ಖಾಸಗಿ ಭೇಟಿಗಾಗಿ ದೇಶಕ್ಕೆ ಆಹ್ವಾನಿಸಲಾಗಿದೆ. ಗೊಟಬಯಾ ಅವರು ದೇಶದ ಆಶ್ರಯ ಕೇಳಿಲ್ಲ. ಅವರಿಗೆ ನಾವು ಆಶ್ರಯ ನೀಡಿಲ್ಲ ಎಂದು ಹೇಳಿಕೆ ನೀಡಿದೆ.
ಜುಲೈ 9 ರಂದು ಶ್ರೀಲಂಕಾದಿಂದ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದ ರಾಜಪಕ್ಸ ಇಂದು ಸಂಜೆ ಅಲ್ಲಿಂದ ಸೌದಿಯಾ ಏರ್‌ಲೈನ್ಸ್ ವಿಮಾನದಲ್ಲಿ ಸಿಂಗಾಪುರಕ್ಕೆ ಆಗಮಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜನರಿಂದ ಹರ್ಷಾಚರಣೆ:ಗೊಟಬಯಾ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಬೆನ್ನಲ್ಲೇ ಪ್ರತಿಭಟನಾಕಾರರು ಹರ್ಷಾಚರಣೆ ಮಾಡಿದ್ದಾರೆ. ಬೀದಿಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಸಂತಸದ ವ್ಯಕ್ತಪಡಿಸಿದ್ದಾರೆ. ರಾಜಪಕ್ಸ ಸಹೋದರರು ರಾಜೀನಾಮೆ ನೀಡಬೇಕು ಎಂದು ತಿಂಗಳುಗಳಿಂದ ಜನರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ಈ ಹಿಂದೆಯೇ ರಾಜೀನಾಮೆ ನೀಡಿದ್ದರು. ಇದೀಗ ಅವರ ಸಹೋದರ ಗೊಟಬಯಾ ರಾಜಪಕ್ಸ ರಾಜೀನಾಮೆ ಘೋಷಿಸಿದ್ದಾರೆೆ.
ಗೊಟಬಯಾ ರಾಜಪಕ್ಸ ದೇಶದಿಂದ ಪರಾರಿಯಾದ ತರುವಾಯ ಸ್ಪೀಕರ್ ಅವರು ಹಂಗಾಮಿ ಅಧ್ಯಕ್ಷರನ್ನಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ನೇಮಿಸಿದ್ದರು. ಇದಾದ ಬಳಿಕ ವಿಕ್ರಮ್ಸಿಂಘೆ ದೇಶಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿದ್ದು, ಅದರ ವಿರುದ್ಧವೂ ಜನರು ದಂಗೆ ಎದ್ದಿದ್ದಾರೆ.
ಓದಿ:ಭಾರತಕ್ಕೂ ಅಡಿ ಇಟ್ಟ ಆಫ್ರಿಕಾದ ಮಂಕಿಪಾಕ್ಸ್ ವೈರಸ್..ಕೇರಳದ ವ್ಯಕ್ತಿಯಲ್ಲಿ ದೃಢ