ಕೊಲಂಬೊ(ಶ್ರೀಲಂಕಾ): ಆರ್ಥಿಕ ಸಂಕಷ್ಟಕ್ಕೊಳಗಾಗಿ ಸಂಪೂರ್ಣ ತತ್ತರಿಸಿರುವ ಶ್ರೀಲಂಕಾದಲ್ಲಿ ಪ್ರತಿಭಟನೆ ಮತ್ತುಷ್ಟು ಜೋರಾಗಿದ್ದು, ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಗೋತಬಯ ರಾಜಪಕ್ಸ ಅವರ ಅಧಿಕೃತ ನಿವಾಸದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾದಲ್ಲಿ ಭುಗಿಲೆದ್ದ ಪ್ರತಿಭಟನೆ ಕೊಲಂಬೊದಲ್ಲಿರುವ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿರುವ ಬೆನ್ನಲ್ಲೇ ಅವರು ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ನಿವಾಸದ ಸುತ್ತಲೂ ಸುತ್ತುವರೆದಿರುವ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಅಧ್ಯಕ್ಷ ಗೋತಬಯ ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದ್ದು, ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ.
ಅಧ್ಯಕ್ಷರ ನಿವಾಸದ ಎದುರು ಹಾಕಲಾಗಿದ್ದ ಬ್ಯಾರಿಕೇಡ್ ಮುರಿದು ಒಳ ನುಗ್ಗಿರುವ ಪ್ರತಿಭಟನಾಕಾರರು, ಗೋತಬಯ ರಾಜಪಕ್ಸ ಅವರ ನಿವಾಸ ಸಂಪೂರ್ಣವಾಗಿ ಹಿಡಿತಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಯಾವುದೇ ರೀತಿಯ ಹಾನಿ ಉಂಟು ಮಾಡಿಲ್ಲ ಎನ್ನಲಾಗಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಲಂಕಾದಲ್ಲಿ ಅಗತ್ಯ ಸಾಮಗ್ರಿ ಖರೀದಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇದನ್ನೂ ಓದಿರಿ:ಟೆಸ್ಟ್ನಿಂದ ಅಶ್ವಿನ್ರನ್ನೇ ಕೈಬಿಟ್ಟ ಮೇಲೆ T-20 ಯಿಂದ ಕೊಹ್ಲಿ ಅವರನ್ನೇ ಏಕೆ ಬಿಡಬಾರದು? ಕಪಿಲ್ ಪ್ರಶ್ನೆ
ಶ್ರೀಲಂಕಾದ ಧ್ವಜಗಳನ್ನ ಕೈಯಲ್ಲಿ ಹಿಡಿದು ಸಾವಿರಾರು ಪ್ರತಿಭಟನಾಕಾರರು ರಸ್ತೆಗಿಳಿದಿದ್ದು, ಅವರನ್ನ ನಿಯಂತ್ರಿಸಲು ಕರ್ಫ್ಯೂ ವಿಧಿಸಲಾಗಿದೆ. 1948ರ ಸ್ವಾತಂತ್ರ್ಯ ಬಳಿಕ ಶ್ರೀಲಂಕಾ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೀರ್ಘಾವಧಿಯ ವಿದ್ಯುತ್ ಕಡಿತ ಮತ್ತು ಇಂಧನ, ಆಹಾರ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳ ಕೊರತೆಗಾಗಿ ಜನರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ.