ವಿಶ್ವಸಂಸ್ಥೆ: ಜಾಗತಿಕವಾಗಿ ಉಷ್ಣಾಂಶ ಹೆಚ್ಚಳವನ್ನು (ಗ್ಲೋಬಲ್ ವಾರ್ಮಿಂಗ್) ನಂಬಲಾಗದಷ್ಟು, ಅಂದರೆ 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಿದರೂ ಸಹ ಸಮುದ್ರ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಮಂಗಳವಾರ ಎಚ್ಚರಿಸಿದ್ದಾರೆ. ಭೂಮಿಯು ಬೆಚ್ಚಗಾಗುವ ಸಾಧ್ಯತೆ ಹೆಚ್ಚಾಗಿದ್ದು, ಇದರ ಪರಿಣಾಮಗಳನ್ನು ಅನುಭವಿಸುವ ದೇಶಗಳಿಗೆ ಇದು ಮರಣ ದಂಡನೆಯ ಶಿಕ್ಷೆಗೆ ಸಮನಾಗಿರುತ್ತದೆ ಎಂದು ಅವರು ಹೇಳಿದರು.
ತಾಪಮಾನದ ಪ್ರತಿ ಡಿಗ್ರಿ ಹೆಚ್ಚಳವು ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಒಂದು ವೇಳೆ ಉಷ್ಣಾಂಶವು 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ ಸಮುದ್ರ ಮಟ್ಟ ಏರಿಕೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಬಹುದು. ಜೊತೆಗೆ ಉಷ್ಣಾಂಶವು ಇದಕ್ಕೂ ಹೆಚ್ಚಾದಲ್ಲಿ ಸಮುದ್ರ ಮಟ್ಟ ಏರಿಕೆಯು ಎಷ್ಟೋ ಪಟ್ಟು ಹೆಚ್ಚಾಗಬಹುದು ಎಂದು ಅವರು ತಿಳಿಸಿದರು. 75 ದೇಶಗಳಲ್ಲಿ ದೂರಸಂಪರ್ಕ ವ್ಯವಸ್ಥೆಯಿಂದ ವೀಕ್ಷಿಸಲ್ಪಡುತ್ತಿರುವ, ಸಮುದ್ರ ಮಟ್ಟ ಏರಿಕೆ ಕುರಿತ ಯುಎನ್ ಭದ್ರತಾ ಮಂಡಳಿಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ಕ್ರಮಗಳಿಗೆ ಬೆಂಬಲವನ್ನು ನಿರ್ಮಿಸುವಲ್ಲಿ ಭದ್ರತಾ ಮಂಡಳಿಯು ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ಹೇಳಿದರು.
ಯಾವುದೇ ಪ್ರತಿಕೂಲ ಸನ್ನಿವೇಶದಲ್ಲಿ ಬಾಂಗ್ಲಾದೇಶ, ಚೀನಾ, ಭಾರತ ಮತ್ತು ನೆದರ್‌ಲ್ಯಾಂಡ್ಸ್‌ನಂಥ ದೇಶಗಳಿಗೆ ಅಪಾಯ ಎದುರಾಗಲಿದೆ. ಕೈರೋ, ಲಾಗೋಸ್, ಮಾಪುಟೊ, ಬ್ಯಾಂಕಾಕ್, ಢಾಕಾ, ಜಕಾರ್ತ, ಮುಂಬೈ, ಶಾಂಘೈ, ಕೋಪನ್‌ಹೇಗನ್, ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಬ್ಯೂನಸ್ ಐರಿಸ್ ಮತ್ತು ಸ್ಯಾಂಟಿಯಾಗೊ ಸೇರಿದಂತೆ ಪ್ರತಿಯೊಂದು ಖಂಡದ ದೊಡ್ಡ ನಗರಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.