ಅಕ್ರಾ(ಪಶ್ಚಿಮ ಆಫ್ರಿಕಾ):ಕೊರೊನಾ ವೈರಸ್‌ನಿಂದ ತತ್ತರಿಸಿರುವ ಜಗತ್ತನ್ನು ಹೊಸ ವೈರಸ್‌ಗಳು ಚಿಂತೆಗೀಡುಮಾಡುತ್ತಿವೆ. ಆಫ್ರಿಕಾದ ಪುಟ್ಟ ದೇಶ ಘಾನಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ 'ಮಾರ್ಬರ್ಗ್ ವೈರಸ್' ಪ್ರಕರಣ ಆತಂಕ ಮೂಡಿಸುತ್ತಿದೆ. ಈ ಹೊಸ ವೈರಸ್‌ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ದೃಢಪಡಿಸಿದೆ.
ಎಬೋಲಾ ತರಹದ ರೋಗಲಕ್ಷಣವುಳ್ಳ ಈ ವೈರಸ್ ವಿಶ್ವವನ್ನು ಚಿಂತೆಗೀಡುಮಾಡಿದೆ. ವೈರಸ್‌ಗೆ ಸಾವಿಗೀಡಾದ ಇಬ್ಬರು ಅತಿಸಾರ, ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರ ಮಾದರಿಗಳನ್ನು ಸಂಗ್ರಹಿಸಿ ಸೆನೆಗಲ್‌ನ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರ ಮಾರ್ಬರ್ಗ್ ವೈರಸ್ ಎನ್ನುವುದು ಖಾತ್ರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಈ ಸಂಗತಿಯನ್ನು ದೃಢಪಡಿಸಿದೆ.
ಇದನ್ನೂಓದಿ:ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ವೈರಸ್ ಪತ್ತೆ.. ದೇಶದಲ್ಲಿಯೇ 2ನೇ ಕೇಸ್
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಘಾನಾ, ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಶಂಕಿತ ಸೋಂಕಿತರು ಮತ್ತು ನಿಕಟ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ. ಪಶ್ಚಿಮ ಆಫ್ರಿಕಾದಲ್ಲಿ ಮಾರ್ಬರ್ಗ್ ಪ್ರಕರಣಗಳು ಬೆಳಕಿಗೆ ಬಂದಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಗಿನಿಯಾ ದೇಶದಲ್ಲಿ ಮೊದಲ ಬಾರಿಗೆ ಈ ಪ್ರಕರಣಗಳು ಪತ್ತೆಯಾಗಿದ್ದವು.
ಮಾರ್ಬರ್ಗ್ ಎಂದರೇನು?:ಮಾರ್ಬರ್ಗ್ ವೈರಸ್ ಎಬೋಲಾ ಪ್ರಭೇದಕ್ಕೆ ಸೇರಿದ ಸಾಂಕ್ರಾಮಿಕ ರೋಗ. ಇದು ಬಾವಲಿಗಳಿಂದ ಹರಡುತ್ತದೆ. ನಂತರ ಮನುಷ್ಯರಿಗೂ ಹರಡುತ್ತದೆ. ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳ ಸಂಪರ್ಕಕ್ಕೆ ಬಂದಾಗ ಅಥವಾ ನಿಕಟ ಸಂಪರ್ಕವನ್ನು ಹೊಂದಿದಾಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳಿವೆ. ಮಾರಣಾಂತಿಕ ವೈರಸ್ ವ್ಯಕ್ತಿಯಲ್ಲಿ 2 ರಿಂದ21 ದಿನಗಳವರೆಗೆ ಜೀವಂತವಾಗಿರುತ್ತದೆ.